Art gallery ಹುಬ್ಬಳ್ಳಿಯ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಡಾ. ಎಂ.ವಿ. ಮಿಣಜಗಿ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಶಿಬಿರ ಹಾಗೂ ಕಮ್ಮಟವನ್ನು ಪಂ. ಕೃಷ್ಣೇಂದ್ರ ವಾಡಿಕರ ಉದ್ಘಾಟಿಸಿದರು. ಶಶಿಧರ ನರೇಂದ್ರ, ಡಾ. ಶಂಕರ ಕುಂದಗೋಳ, ಆರ್.ಬಿ. ಗರಗ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಸ್ಕಾರ ಭಾರತಿ ಉಪಾಧ್ಯಕ್ಷ ಕೃಷ್ಣೇಂದ್ರ ಅಭಿಮತ
ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಜನ್ಮದಿನಾಚರಣೆ
ಹುಬ್ಬಳ್ಳಿ: art gallery ಇಂದಿನ ತಾಂತ್ರಿಕತೆ ಹಾಗೂ ಎಐನಿಂದಾಗಿ ಎಲ್ಲ ರಂಗಗಳಿಗೂ ಕೆಡಕಾಗುತ್ತಿದೆ. ಸಂಗೀತಗಾರರೊಬ್ಬರ ಧ್ವನಿಯನ್ನೂ ಸಹ ನಕಲು ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಕಲಾವಿದರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಿದೆ ಎಂದು ಸಂಸ್ಕಾರ ಭಾರತಿ ಉಪಾಧ್ಯಕ್ಷ ಕೃಷ್ಣೇಂದ್ರ ವಾಡಿಕರ ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಕಲಾಮಂದಿರ ಸಮಿತಿ ಹಾಗೂ ಸಂಸ್ಕಾರ ಭಾರತಿ ಸಹಯೋಗದಲ್ಲಿ ಡಾ. ಎಂ.ವಿ. ಮಿಣಜಗಿ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಶಿಬಿರ ಹಾಗೂ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಯಾರ ಬಗ್ಗೆ ನಮಗೆ ಗೊತ್ತಿರುವುದಿಲ್ಲವೋ ಅದನ್ನು ಕಲೆ ತಿಳಿಸಿಕೊಡುತ್ತದೆ. ಆದರೆ, ಇಂದಿನ ಕಾಲದಲ್ಲಿ ಜೀವನೋಪಾಯಕ್ಕಾಗಿ ಕಲೆ ಎಂಬಂತಾಗಿದೆ. ಒಬ್ಬರ ಧಾರ್ಮಿಕ ಭಾವನೆಗೆ ಯಾವುದೇ ಕಾರಣಕ್ಕೂ ಧಕ್ಕೆ ತರಬಾರದು. ದೇವರನ್ನು ಕೆಟ್ಟದಾಗಿ ನೋಡುವಾತ ಎಷ್ಟೇ ದೊಡ್ಡ ಕಲಾವಿದ ಇದ್ದರೂ ಆತ ವಿಧ್ವಂಸಕ ಎಂದು ಹೇಳಿದರು.
ಆಕಾಶವಾಣಿ ಉದ್ಘೋಷಕ ಶಶಿಧರ ನರೇಂದ್ರ ಮಾತನಾಡಿ, ಕಲೆಯು ಮುಕ್ತಿಗಾಗಿ ಎನ್ನುವುದು ವಾಸ್ತವ, ಇಂತಹ ಕಲೆಯು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತದೆ. ವಿಲಾಸಕ್ಕಾಗಿ ಕಲೆ ಎಂದಾಗ ಅದರ ಮಹತ್ವ ಕಡಿಮೆಯಾಗುತ್ತದೆ, ವ್ಯಕ್ತಿಯಲ್ಲಿ ಕಲೆ ಇದ್ದರೆ ಪ್ರತಿ ಕ್ಷಣಕ್ಕೂ ಹೊಸತನ ಕಾಣುತ್ತದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಕಾರ ಭಾರತಿ ದೃಶ್ಯಕಲೆ ಸಂಯೋಜಕ ಡಾ. ಶಂಕರ ಕುಂದಗೋಳ, ಮಿಣಜಗಿ ಅವರು ನಾಡಿನ ಶ್ರೇಷ್ಠ ಕಲಾವಿದರು. ಭಾರತೀಯ ಕಲೆ ಅತ್ಯಂತ ಶ್ರೀಮಂತವಾಗಿದೆ. ಆದರೆ, ಅದನ್ನು ಸಂರಕ್ಷಣೆ ಮಾಡುವ ಕಾರ್ಯ ಆಗುತ್ತಿಲ್ಲ. ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಎಂದರು.
ಭಾರತೀಯ ದೇವರು, ಚಿತ್ರಕಲೆಗಳನ್ನು ವಿರೂಪ ಮಾಡುವ ಕೆಲಸವನ್ನು ಯಾವುದೇ ಕಲಾವಿದರು ಮಾಡಬಾರದು ಎಂದು ಸೂಚ್ಯವಾಗಿ ಹೇಳಿದರು.
ಹಿರಿಯ ಕಲಾವಿದ, ಸಮಿತಿ ಅಧ್ಯಕ್ಷ ಆರ್.ಬಿ. ಗರಗ ಅಧ್ಯಕ್ಷತೆ ವಹಿಸಿದ್ದರು. ಸುಮಂಗಲಾ ಭಟ್ ಪ್ರಾರ್ಥನೆ ಹಾಡಿದರು. ಮಂಜುಳಾ ಕೆ.ವಿ. ಸ್ವಾಗತಿಸಿದರು.