aravinda bellada ಸತೀಶ ಜಾರಕಿಹೊಳಿ ರಾಜೀನಾಮೆ ನೀಡಲಿ

aravinda bellada ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ
aravinda bellada ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹ
ಹುಬ್ಬಳ್ಳಿ: ಸಚಿವ ಸತೀಶ ಜಾರಕಿಹೊಳಿ aravinda bellada ಹಾಗೂ ಅವರಿಗೆ ಸಂಬಂಧಿಸಿದವರ ಆಸ್ತಿ, ಹೂಡಿಕೆ ಮತ್ತು ವಹಿವಾಟುಗಳ ಕುರಿತು ಹಲವು ವಿಚಾರಗಳು ಜಾರಿ ನಿರ್ದೇಶನಾಲಯ (ಇಡಿ) ದಾಳಿಯಲ್ಲಿ ಬಹಿರಂಗವಾಗಿವೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಸತೀಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸತೀಶ ಅವರ ರಾಜೀನಾಮೆ ಪಡೆಯಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸತೀಶ ಜಾರಕಿಹೊಳಿ ಹಾಗೂ ಅವರಿಗೆ ಸಂಬಂಧಿಸಿದವರ ಸುಮಾರು 18 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ. ಇಡಿ ನೀಡಿರುವ ಮಾಹಿತಿಯಂತೆ 3 ಕೋಟಿ ರೂ.ಗೂ ಅಧಿಕ ನಗದು ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಅಲ್ಲದೆ, ಸತೀಶ ಜಾರಕಿಹೊಳಿ ಮತ್ತು ಅವರ ಕುಟುಂಬದವರು ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಬಯಲಾಗಿದೆ ಎಂದರು.
ಕೋಲ್ಕತ್ತಾದ ಕಂಪನಿಯೊಂದಕ್ಕೆ ನಿಯಮ ಉಲ್ಲಂಘಿಸಿ 2,477 ಕೋಟಿ ರೂ. ಮೊತ್ತದ ಟೆಂಡರ್ ನೀಡಲಾಗಿದೆ ಎಂಬ ಆರೋಪವಿದೆ. ಹೂಡಿಕೆಯ ಹಣ ಎಲ್ಲಿಂದ ಬಂತು?, ಯಾವ ಕಂಪನಿಗಳಿಗೆ ಹಣ ಹೋಗಿದೆ? ಟೆಂಡರ್ ನೀಡಲು ಕಿಕ್‌ಬ್ಯಾಕ್ ನಡೆದಿದೆಯೇ? ಎಂಬುದರ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ತನಿಖೆ ನಡೆಯುವಾಗ ಸಚಿವರೇ ಇಲಾಖೆಯ ಮುಖ್ಯಸ್ಥರಾಗಿರುವುದು ಸರಿಯಲ್ಲ. ಹೀಗಾಗಿ ಸತೀಶ ಜಾರಕಿಹೊಳಿ ಕೂಡಲೇ ರಾಜೀನಾಮೆ ನೀಡಬೇಕು. ತನಿಖೆಯಲ್ಲಿ ಅವರು ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಸಚಿವರಾಗುವುದಕ್ಕೆ ಬಿಜೆಪಿಗೆ ಯಾವುದೇ ತಕರಾರಿಲ್ಲ. ತಪ್ಪಿತಸ್ಥರೆಂದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಈ ಪ್ರಕರಣದಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದರು.
ಬರಪೀಡಿತ ತಾಲೂಕುಗಳ ಘೋಷಣೆ ಸಮರ್ಪಕವಾಗಿ ನಡೆದಿಲ್ಲ. ಧಾರವಾಡ ಜಿಲ್ಲೆಯ ಹಲವು ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಸರ್ಕಾರ ಕರೆದಿರುವ ಮೂರು ದಿನಗಳ ಅಧಿವೇಶನ ಯಾವುದಕ್ಕೂ ಸಾಲದು. ಕನಿಷ್ಠ 10 ದಿನಗಳ ವಿಶೇಷ ಅಧಿವೇಶನ ನಡೆಸಬೇಕು. ಈ ಕುರಿತು ಪತ್ರ ಕೂಡ ಬರೆಯುವೆ ಎಂದು ತಿಳಿಸಿದರು.
ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲೂ ಕೇವಲ ಇಬ್ಬರನ್ನು ಹೊಣೆಗಾರರನ್ನಾಗಿ ಮಾಡಿ ಪ್ರಕರಣ ಮುಗಿಸಬಾರದು. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾವುದೇ ಪಕ್ಷದವರಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು. ಯಾರಾದರೂ ಬಿಜೆಪಿ ನಾಯಕರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರು ಬಿಜೆಪಿ ಬೆಂಬಲಿಗರೆಂದು ಅರ್ಥೈಸುವುದು ಸರಿಯಲ್ಲ. ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದರು.
ಬಳ್ಳಾರಿ ಪಾದಯಾತ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಸ್ತಿತ್ವ ಉಳಿಸಿಕೊಳ್ಳುವ ಯಾತ್ರೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಬೆಲ್ಲದ, ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ, ಮೀಸಲು ಅನುದಾನ ಬಳಕೆಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು. ಎಸ್‌ಸಿ-ಎಸ್‌ಟಿ ಮೀಸಲಾತಿ ಹಗರಣಕ್ಕೆ ಸಂಬಂಧಿಸಿದ 187 ಕೋಟಿ ರೂ. ಮೊತ್ತದ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಣ ಯಾರಿಗೆ ಹೋಗಿದೆ ಎಂಬುದನ್ನು ಪತ್ತೆಹಚ್ಚಬೇಕು. ಹಣ ವಾಪಸ್ ಪಡೆದು ಜನರಿಗೆ ತಲುಪಿಸುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ಅಗತ್ಯ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net