

ಹುಬ್ಬಳ್ಳಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿ ವತಿಯಿಂದ ಜಾಗೃತಿ ಸಪ್ತಾಹದ ಅಂಗವಾಗಿ ಇಲ್ಲಿಯ ತೋಳನಕೆರೆ ಉದ್ಯಾನದಲ್ಲಿ ಭ್ರಷ್ಟಾಚಾರ ವಿರೋಧಿ ಅರಿವು ಕಾರ್ಯಕ್ರಮ ಹಾಗೂ ಜಾಥಾ ಆಯೋಜಿಸಲಾಯಿತು.
ಪ್ರಾದೇಶಿಕ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯು ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಸ್ಟಾಪ್ ಕರಪ್ಶನ್' ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಸಂದೇಶ ಸಾರಿದರು.
ಭ್ರಷ್ಟಾಚಾರ ನಿರ್ಮೂಲನೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಜೀವನದಲ್ಲಿ ನೈತಿಕ ಮೌಲ್ಯಗಳ ಪಾಲನೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಹಾಗೂ ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಭ್ರಷ್ಟಾಚಾರ ವಿರೋಧಿ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ಹಾಗೂ ಪಾರದರ್ಶಕ ಬ್ಯಾಂಕಿಂಗ್ ಸೇವೆಗಳ ಮಹತ್ವವನ್ನು ಸಾರುವಲ್ಲಿ ಕಾರ್ಯಕ್ರಮ ಸಹಕಾರಿಯಾಯಿತು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಮುಖ್ಯಸ್ಥ ದೊಡ್ಡರಂಗಪ್ಪ, ಮುಖ್ಯ ಪ್ರಬಂಧಕರಾದ ಮಿಲಿಂದ್, ಅಜಯ ಕುಮಾರ ಸಿನ್ಹಾ ಹಾಗೂ ಮಂಜುನಾಥ ನಾಯಕ್ ಇತರರು ಭಾಗವಹಿಸಿದ್ದರು.