ಪತ್ನಿಯಿಂದ ಅರವಳಿಕೆ ತಜ್ಞ ವೈದ್ಯನ ಕೊಲೆ

ಡಾ. ಕಿರಣ್​ ಮತ್ತು ಪ್ರಿಯಾಂಕಾ
ಡಾ. ಕಿರಣ್​ ಮತ್ತು ಪ್ರಿಯಾಂಕಾ
Published on
ಧಾರವಾಡ: ಪತ್ನಿಯೇ ತನ್ನ ವೈದ್ಯ ಪತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನಗರದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್​ಮೆಂಟ್​ನಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಪತಿಯನ್ನು ಹತ್ಯೆಗೈದ ಬಳಿಕ 8 ವರ್ಷದ ಮಗನ ಮೇಲೂ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಬಾಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿದ್ದ ಡಾ. ಕಿರಣ್​ ಹೊನ್ನಣ್ಣವರ (45) ಕೊಲೆಯಾದವರು. ಇವರ ಪತ್ನಿ ಪ್ರಿಯಾಂಕಾ ಹಾಗೂ ಮಗ ನೇಹಿತ್​ (8) ಜತೆ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದರು.
* ಬಾಗಿಲು ಹಾಕಿಕೊಂಡು ಮನೆಯಲ್ಲೇ ಇದ್ದ ಪತ್ನಿ:
ಕೊಲೆಯಾದ ಡಾ. ಕಿರಣ್​ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞವೈದ್ಯರಾಗಿದ್ದರು. ಅವರ ಪತ್ನಿ ಪ್ರಿಯಾಂಕಾ ಎಂಬಿಬಿಎಸ್​ ಓದಿದ್ದು, ಗೃಹಿಣಿಯಾಗಿದ್ದರು. ಮಂಗಳವಾರ ರಾತ್ರಿಯೇ ಡಾ. ಕಿರಣ್​ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಒಂದು ಕೊಠಡಿಯಲ್ಲಿ ಪತಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರೆ, ಪಕ್ಕದ ರೂಮ್​ನಲ್ಲಿದ್ದ ಮಗ ನೇಹಿತ್​ಗೂ ಚಾಕುವಿನಿಂದ ಇರಿದಿದ್ದಾಳೆ. ಆತನೂ ಮೃತಪಟ್ಟಿದ್ದಾನೆ ಎಂದುಕೊಂಡು ಎಂದಿನಂತೆ ಅದೇ ಕೊಠಡಿಯಲ್ಲಿ ರಾತ್ರಿ ಕಳೆದಿದ್ದಾಳೆ.
* ಸಂಬಂಧಿಕರಿಗೆ ಸಂಶಯ:
ಮೃತ ಡಾ. ಕಿರಣ್​ ಸಂಬಂಧಿಕರು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕರೆ ಮಾಡಿದ್ದಾರೆ. ಕಿರಣ್​ ಮೊಬೈಲ್​ ಸ್ವೀಕರಿಸಿದ ಪ್ರಿಯಾಂಕಾ, "ಅವರು ಆಸ್ಪತ್ರೆಗೆ ಹೋಗಿದ್ದಾರೆ, ಹೊರಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾಳೆ. ಸಂಶಯಗೊಂಡ ಸಂಬಂಧಿಕರು ಬೆಳಗಾವಿ ಜಿಲ್ಲೆ ಸಂಕೇಶ್ವರದಿಂದ ಬುಧವಾರ ಸಂಜೆ 7 ಸುಮಾರಿಗೆ ಅಪಾರ್ಟ್​ಮೆಂಟ್​ಗೆ ಬಂದಿದ್ದಾರೆ. ಕೆಲಹೊತ್ತು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
* ಜೀವಂತವಿದ್ದ ಬಾಲಕ:
ಸ್ಥಳಕ್ಕೆ ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ್​ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಮನೆಯ ಬಾಗಿಲು ತೆರೆಸಿದ್ದಾರೆ. ಒಳಗೆ ನೋಡಿದಾಗ ಡಾ. ಕಿರಣ್​ ರಕ್ತದ ಮಡುವಿನಲ್ಲಿ ಕೊಲೆಯಾಗಿದ್ದರು. ಮತ್ತೊಂದು ರೂಮ್​ನಲ್ಲಿ ಅವರ ಮಗ ನೇಹಿತ್​ ಕೂಡ ಗಾಯಗೊಂಡು ಬಿದ್ದಿದ್ದ. ಮನೆಯಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ಆರೋಪಿ ಪ್ರಿಯಾಂಕಾ ಮೊಬೈಲ್​ ನೋಡುತ್ತ ಅತ್ತಿತ್ತ ಓಡಾಡುತ್ತಿದ್ದಳು. ಬಾಲಕನ ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿದ ಪೊಲೀಸ್​ ಆಯುಕ್ತ ಶಶಿಕುಮಾರ್​, ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆಯಲಾಗಿದೆ.
"

ಡಾ. ಕಿರಣ್​ ಸಂಬಂಧಿಕರು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆಯಿಂದ ಕರೆ ಮಾಡಿದಾಗ ಆರೋಪಿ ಪ್ರಿಯಾಂಕಾ ಸುಳ್ಳು ಹೇಳಿದ್ದಾರೆ. ಇದರಿಂದ ಸಂಶಯಗೊಂಡ ಸಂಬಂಧಿಕರು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.

— ಎನ್​. ಶಶಿಕುಮಾರ್​, ಹುಧಾ ಪೊಲೀಸ್​ ಆಯುಕ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net