ಏಡ್ಸ್ ಮುಂಜಾಗ್ರತೆ, ಜಾಗೃತಿ, ಅರಿವು ಅಗತ್ಯ

Aids-prevention-awareness
Aids-prevention-awareness
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಏಡ್ಸ್ಸ್ ದಿನಾಚರಣೆಯ ಅಂಗವಾಗಿ ಜನಜಾಗೃತಿ ಜಾಥಾ
  • ಧಾರವಾಡದಲ್ಲಿ ಏಡ್ಸ್ ಪಾಜಿಟಿವಿಟಿ ದರ ಶೇ.0.38ರಷ್ಟಿದೆ
  • ಏಡ್ಸ್ ಜಾಗೃತಿ, ಅರಿವು
ಧಾರವಾಡ: ಏಡ್ಸ್ (Aids) ರೋಗದ ಮುಂಜಾಗ್ರತೆ, ಜಾಗೃತಿ, ಅರಿವು ಅಗತ್ಯವಾಗಿದೆ. ಈಗ ಜಿಲ್ಲೆಯಲ್ಲಿ ಏಡ್ಸ್ ಪಾಜಿಟಿವಿಟಿ ದರ ಶೇ.0.38ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸಿ, ಧಾರವಾಡ ಜಿಲ್ಲೆಯನ್ನು ಏಡ್ಸ್ಸ್ ಮುಕ್ತ ಜಿಲ್ಲೆಯಾಗಿ ಮಾಡಲು ಅಗತ್ಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಸಂಘಟಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಏಡ್ಸ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಏಡ್ಸ್ ಕುರಿತು ಜನಜಾಗೃತಿಗೆ ಐಇಸಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು 11, ಎಪ್-ಐಸಿಟಿಸಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು 32, ಪಿಪಿಪಿ ಕೇಂದ್ರ 1, ಪೂರ್ಣ ಪ್ರಮಾಣದ ಏಆರ್‌ಟಿ ಚಿಕಿತ್ಸಾ ಕೇಂದ್ರಗಳು 2, ಲೈಂಗಿಕ ಸಂಪರ್ಕದ ರೋಗಗಳ ಚಿಕಿತ್ಸಾ ಕೇಂದ್ರಗಳು 2, ರಕ್ತ ನಿಧಿ ಕೇಂದ್ರಗಳು 10, ಬೆಂಬಲ ಮತ್ತು ಆರೈಕೆ ಕೆಂದ್ರಗಳು ಸೇರಿ ವಿವಿಧ 5 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಏಡ್ಸ್ ಮತ್ತು ಎಚ್‌ಐವಿ ಸೋಂಕಿತರಿಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ, ಉಚಿತ ಚಿಕಿತ್ಸೆ, ಉಚಿತ ಔಷಧಿ ಮತ್ತು ಆರೈಕೆ ನೀಡಲಾಗುತ್ತಿದೆ ಎಂದರು.
ಸೋಕಿತ ಅನಾಥ, ಅಪಾಯದಂಚಿನ ಮಕ್ಕಳ ಆರೋಗ್ಯ ರಕ್ಷಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ವಿಶೇಷ ಪಾಲನಾ ಯೋಜನೆಯಡಿ ಈವರೆಗೆ 2,037 ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಎಚ್‌ಐವಿ, ಏಡ್ಸ್ದೊಂದಿಗೆ ಬದಕುತ್ತಿರುವ 371 ಜನರಿಗೆ ಅನ್ನ ಅಂತ್ಯೊದಯ ಕಾರ್ಯಕ್ರಮದಲ್ಲಿ ನೆರವು ನೀಡಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ 476 ಜನರಿಗೆ ವಸತಿ ಸೌಲಭ್ಯ ನೀಡಲು ಆಯ್ಕೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್.ದೊಡ್ಡಮನಿ ಮಾತನಾಡಿ, ಎಚ್‌ಐವಿ, ಏಡ್ಸ್ ಸೋಂಕಿತರಿಗೆ, ಭಾದಿತರಿಗೆ ಸಮಾಜದಲ್ಲಿ ಮಾನಸಿಕ ಬೆಂಬಲ ಸೀಗಬೇಕು. ಪ್ರಾಧಿಕಾರದಿಂದ ಎಚ್‌ಐವಿ ಭಾದಿತರಿಗೆ ಉಚಿತ ಕಾನೂನು ಅರಿವು-ನೆರವು ನೀಡಲಾಗುತ್ತದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರವೀಂದ್ರ ಬೋವೆರ ಸ್ವಾಗತಿಸಿದರು. ಐಇಸಿ ವಿಭಾಗದ ಅಧಿಕಾರಿ ಬಿ.ಆರ್.ಪತ್ತಾರ ನಿರೂಪಿಸಿದರು. ಜಾನಪದ ಕಲಾವಿದ ಶಂಭಯ್ಯ ಹಿರೇಮಠ ನೇತೃತ್ವದ ಜಾನಪದ ಕಲಾ ತಂಡದಿದ ಜಾನಪದ ರೂಪಕ ಪ್ರದರ್ಶಿಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮ ಅಽಕಾರಿಗಳು, ವಿವಿಧ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಏಡ್ಸ್ ಕುರಿತು ಜನಜಾಗೃತಿ ಜಾಥಾ ಡಿಎಚ್‌ಒ ಕಚೇರಿಯಿಂದ ಆರಂಭವಾಗಿ ಧಾರವಾಡ ಹಳೇ ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಆಲೂರು ವೆಂಕಟರಾವ ವೃತ್ತ ಮೂಲಕ ಡಿಎಚ್‌ಒ ಕಚೇರಿಗೆ ತಲುಪಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net