ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು, ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (abvp) ನೇತೃತ್ವದಲ್ಲಿ ನಗರದ ಬಿವಿಬಿ ಕಾಲೇಜ್ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಎಬಿವಿಪಿಯ ಕೇಂದ್ರೀಯ ಕಾರ್ಯ ಸಮಿತಿ ಸದಸ್ಯ ಸಚಿನ್ ಕುಳಗೇರಿ ಮಾತನಾಡಿ, ವಿದ್ಯಾ ಸಂಸ್ಥೆಗಳು ಜ್ಞಾನಾರ್ಜನೆಯ ಕೇಂದ್ರಗಳಾಗಬೇಕು. ಆದರೆ, ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳೇ ದೇಶ ವಿರೋಧಿ ಚಟುವಟಿಕೆಗಳ ತಾಣವಾಗಿವೆ. ಇದು ವಿಪರ್ಯಾಸ ಸಂಗತಿ. ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಚಿಂತನೆಗಳ ಕೂಟ ನಡೆಸಿ ಸೈನಿಕರು ಅತ್ಯಾಚಾರಿಗಳು, ಹಿಂಸಾಚಾರಿಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ. ಕಾಶ್ಮೀರ ಭಾರತದ ಭಾಗವಲ್ಲ, ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ದೇಶ ವಿರೋಧಿ ಕಾರ್ಯಕ್ರಮಗಳ ಮೂಲಕ ಭಾರತದ ಸಮಗ್ರತೆಗೆ ಧಕ್ಕೆ ತರುವ ಕಾರ್ಯ ಮಾಡುತ್ತಿದೆ. ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪ್ರಕರಣವನ್ನ ದಾಖಲು ಮಾಡಿರುವುದು ರಾಜ್ಯ ಸರ್ಕಾರದ ನಾಚಿಕೆಗೇಡಿನ ಸಂಗತಿ ಎಂದರು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿ ದರ್ಶನ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ದೇಶದ್ರೋಹಿಗಳನ್ನು ಬಂಧಿಸಬೇಕೆ ಹೊರತು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವ ಕಾರ್ಯಕರ್ತರನ್ನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿಯ ಜಿಲ್ಲಾ ಸಂಚಾಲಕ ಸಿದ್ದಾರ್ಥ ಕೋರೆ, ಅಥರ್ವ ಚವ್ಹಾಣ, ಲೋಕೇಶ ಚಿಗರೆ, ತಿಲಕ, ಶಿವಕುಮಾರ, ಪೃಥ್ವಿರಾಜ, ಚೈತ್ರ, ಮೇಘನಾ, ಶ್ರಾವಣಿ, ಅಜಯ, ಕರ್ಣ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.