ವಿಘ್ನ ವಿನಾಶಕನಿಗೆ ಸಂಭ್ರಮದ ವಿದಾಯ

ಹುಬ್ಬಳ್ಳಿ ಅದ್ದೂರಿ ಗಣೇಶೋತ್ಸವಕ್ಕೆ ತೆರೆ
ಹುಬ್ಬಳ್ಳಿ ದಾಜಿಬಾನಪೇಟನಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆ ಮೆರವಣಿಗೆ ಸಂಭ್ರಮ.
ಹುಬ್ಬಳ್ಳಿ ದಾಜಿಬಾನಪೇಟನಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆ ಮೆರವಣಿಗೆ ಸಂಭ್ರಮ.
Published on: 

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 12 ದಿನಗಳ ಕಾಲ ಸಡಗರ, ಸಂಭ್ರಮ ಹೆಚ್ಚಿಸಿದ್ದ ಅದ್ದೂರಿ ಗಣೇಶೋತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.

ನಗರದ ಗಲ್ಲಿ, ಓಣಿ, ಪ್ರಮುಖ ರಸ್ತೆಗಳಲ್ಲಿ ವಿರಾಜಮಾನನಾಗಿ ವಿರಾಟರೂಪ ದರ್ಶನ ನೀಡಿದ ವಿಘ್ನ ವಿನಾಶಕನಿಗೆ ಇಂದು ಭಕ್ತಿ ಭಾವದಿಂದ ವಿದಾಯ ಹೇಳಲಾಯಿತು.

ಭವ್ಯ ಹಾಗೂ ಅದ್ದೂರಿ ಉತ್ಸವಕ್ಕೆ ಹೆಸರುವಾಸಿಯಾಗಿರುವ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವವು ಈ ಬಾರಿಯೂ ಲಕ್ಷಾಂತರ ಭಕ್ತರನ್ನು ಸೆಳೆಯಿತು.

ಐತಿಹಾಸಿಕ, ಪೌರಾಣಿಕ ಕಥೆ, ದೇವರ ವಿವಿಧ ರೂಪಗಳನ್ನು ಹೊತ್ತು ತಂದಿದ್ದ ಗಣೇಶನಿಗೆ ನಿತ್ಯವೂ ವಿಶೇಷ ಪೂಜೆ, ಹೋಮ ಹವನಗಳನ್ನು ಮಾಡಿ ಭಕ್ತಿಯಿಂದ ನಮಿಸಲಾಯಿತು. ಅಸಂಖ್ಯ ಭಕ್ತರು ನಿತ್ಯ ಗಣಪನ ದರ್ಶನ ಪಡೆದು ಪುನಿತರಾದರು.

ಶುಕ್ರವಾರ ಮಧ್ಯಾಹ್ನದಿಂದ ಆರಂಭವಾದ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯು ತಡರಾತ್ರಿಯವರೆಗೂ ನಡೆಯಿತು.

ಬೃಹತ್​ ಶ್ರೀಗಣೇಶ ವಿಗ್ರಹಗಳನ್ನು ಅಲಂಕೃತ ಟ್ರಾಲಿ ಇತ್ಯಾದಿಗಳಲ್ಲಿ ಪ್ರತಿಷ್ಠಾಪಿಸಿ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಗಣಪನ ಮೂರ್ತಿಗಳ ಸಾಲುಸಾಲು ರಸ್ತೆಯಲ್ಲಿ ಬರುತ್ತಿದ್ದಂತೆ ಭಕ್ತರು ಕುಣಿದು ಕುಪ್ಪಳಿಸಿದರು.

ವಿವಿಧ ಊರುಗಳಿಂದಲೂ ಭಕ್ತರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾಗಿ ಸಡಗರ ಹೆಚ್ಚಿಸಿದರು. ಮೆರವಣಿಗೆಯುದ್ದಕ್ಕೂ ವಿವಿಧ ವಾದ್ಯ ಮೇಳಗಳು, ಡಿಜೆ ಸೌಂಡ್​ ಅಬ್ಬರಕ್ಕೆ ಯುವಕರು, ಯುವತಿಯರು ಹೆಜ್ಜೆ ಹಾಕಿದರು.

ವಿವಿಧ ಭಜನಾ ಮಂಡಳಿಗಳು, ವೇಷಭೂಷಣಗಳು, ಜಾಂಜ್​ ಪಥಕ್​, ಜಾನಪದ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು.

ಗಣಪತಿ ಮಹಾರಾಜ ಕೀ ಜೈ, ಗಣಪತಿ ಬಪ್ಪಾ ಮೋರಯಾ, ಪುಡಚ್ಯಾ ವರ್ಷೀ ಲೌಕರ್​ ಯಾ... ಬಪ್ಪರೇ ಬಪ್ಪಾ ಗಣಪತಿ ಬಪ್ಪಾ... ಘೋಷಣೆಗಳು ಮುಗಿಲು ಮುಟ್ಟಿದ್ದವು. ಇದರಿಂದ ಉತ್ತೇಜನಗೊಂಡ ರಸ್ತೆ ಬದಿ ನಿಂತಿದ್ದ ಅನೇಕರು ಸಹ ಸಂಗೀತಕ್ಕೆ ನೃತ್ಯ ಮಾಡಿದರು.

ಸಿಡಿಮದ್ದುಗಳ ಅಬ್ಬರ, ಬಾನೆತ್ತರಕ್ಕೆ ಹಾರುವ ಬಾನಗಳು, ಪಟಾಕಿಗಳು ಬಾನಿನಲ್ಲಿ ಬಣ್ಣದ ಲೋಕ ಸೃಷ್ಟಿಸಿದ್ದವು.

ಗಣೇಶನ ಮೆರವಣಿಗೆ ಮನೆ ಮುಂದೆ ಬರುತ್ತಿದ್ದಂತೆ ಮಹಿಳೆಯರು ಪುಷ್ಪಾರ್ಚನೆ, ಆರತಿ ಮಾಡಿ ನೈವೇದ್ಯ ಅಪಿರ್ಸಿದರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.

ಮೆರವಣಿಗೆಯು ಹುಬ್ಬಳ್ಳಿ ದುರ್ಗದಬೈಲ್​ನಿಂದ ಪ್ರಾರಂಭವಾಗಿ ಬ್ರಾಡ್​ವೇ, ಮರಾಠಗಲ್ಲಿ ಕ್ರಾಸ್​, ಮೇದಾರ ಓಣಿ, ದಾಜಿಬಾನ ಪೇಟ, ಜನತಾ ಬಜಾರ, ವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮುಖಾಂತರ ಇಂದಿರಾ ಗಾಜಿನಮನೆ ಆವರಣದ ಬಾವಿ ಹಾಗೂ ಹೊಸೂರಿನಲ್ಲಿರುವ ಬಾವಿವರೆಗೆ ಸಾಗಿ ಅಲ್ಲಿ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net