ಧಾರವಾಡ: ಶಹರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 7 ದ್ವಿಚಕ್ರ ವಾಹನ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಮಾಳಾಪೂರ ದ್ಯಾಮವ್ವನ ಗುಡಿ ಓಣಿಯ ಶಿವಾನಂದ ಅರ್ಜುನ ಮಾನೆ ಬಂಧಿತ ಆರೋಪಿ. ಈತನಿಂದ ಸುಮಾರು 2,35,000 ರೂಪಾಯಿ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಇಲ್ಲಿನ ಉಪನಗರ ಮತ್ತು ಶಹರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಶಹರ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.