

ಧಾರವಾಡ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಫಲಾನುಭವಿಗಳ ನೈಜತೆ ಪರಿಶೀಲನೆಯ ವೇಳೆ ಜಿಲ್ಲೆಯಲ್ಲಿ 697 ಅನರ್ಹರ ಪತ್ತೆಯಾಗಿದ್ದು, ಅವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಉದ್ಯೋಗದ ಜತೆಗೆ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದವರು ಪತ್ತೆಯಾಗಿದ್ದಾರೆ.
ಡಿಪ್ಲೊಮಾ, ಪದವಿ ಸೇರಿ ಉನ್ನತ ಶಿಕ್ಷಣ ಪಡೆದ ನಿರುದ್ಯೋಗಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಯುವ ನಿಧಿ ಯೋಜನೆ ಆರಂಭಿಸಿ, ನಿರುದ್ಯೋಗ ಭತ್ಯೆ ನೀಡುತ್ತಿದೆ. ಆದರೆ, ಉದ್ಯೋಗದಲ್ಲಿದ್ದವರು, ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾದವರು ಹಾಗೂ ಸ್ವಯಂ ಉದ್ಯೋಗ ಆರಂಭಿಸಿಯೂ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದ 697 ಜನರನ್ನು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು
ಜೀವನೋಪಾಯ ಇಲಾಖೆ ಪತ್ತೆ ಹಚ್ಚಿದೆ. ಇಂಥವರನ್ನು ಫಲಾನುಭವಿಗಳ ಪಟ್ಟಿಯಿಂದ ತೆರವುಗೊಳಿಸಲಾಗಿದೆ.
ಬಹಳಷ್ಟು ಜನರು ತಾವು ಬೇರೆಡೆ ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರಿಂದ ಅಂತಹವರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆಯಲಾಗಿದೆ. ಪ್ರಸ್ತುತ ಪ್ರತಿ ತಿಂಗಳು ಸಹ ಫಲಾನುಭವಿಗಳು ಸ್ವಯಂ ಘೋಷಣೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಘೋಷಣೆ ಮಾಡಿಕೊಂಡಿದ್ದನ್ನು ವೆಬ್ ಸೈಟ್‌ನಲ್ಲಿ ದಾಖಲಿಸಬೇಕು. ಈ ರೀತಿ ಮಾಡದ ಫಲಾನುಭವಿಗಳನ್ನು ಸಹ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ.
ಧಾರವಾಡ ತಾಲೂಕಿನಲ್ಲಿ 224, ಹುಬ್ಬಳ್ಳಿ ನಗರ 193, ನವಲಗುಂದ 88, ಕಲಘಟಗಿ 80, ಕುಂದಗೋಳ 64, ಅಣ್ಣಿಗೇರಿ 34, ಅಳ್ಳಾವರ 14 ಫಲಾನುಭವಿಗಳು ಅನರ್ಹಗೊಂಡಿದ್ದಾರೆ.
ಯುವನಿಧಿ ಪ್ಲಸ್ ಯೋಜನೆ: ಯುವನಿಧಿ ಯೋಜನೆ ಬಳಿಕ ರಾಜ್ಯ ಸರ್ಕಾರವು ಯುವಕರಿಗಾಗಿ ಯುವನಿಧಿ ಪ್ಲಸ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಉದ್ಯೋಗಾಕಾಂಕ್ಷಿ ಯುವಕರಿಗೆ ಕೌಶಲ ತರಬೇತಿ ಮತ್ತು ಆರ್ಥಿಕ ಸಹಾಯ ಒದಗಿಸುವ ಗುರಿ ಹೊಂದಿದೆ. ಪದವಿ ಅಥವಾ ಡಿಪ್ಲೊಮಾ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಅಲ್ಪಾವಧಿಯ ಕೌಶಲ ಮತ್ತು ಉದ್ಯಮಶೀಲತಾ ತರಬೇತಿ ನೀಡುವುದಾಗಿದೆ. ತರಬೇತಿ ಅವಧಿಯಲ್ಲಿ ಯುವಕರಿಗೆ ತಿಂಗಳಿಗೆ 3,000 ರೂ. ಗಳ ಸ್ಟೈಫಂಡ್ ನೀಡಲಾಗುತ್ತದೆ. ಸರ್ಕಾರಿ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುತ್ತದೆ. ಕರ್ನಾಟಕದ ಯುವಕರು, ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿರಬೇಕು
ಜಿಲ್ಲೆಯಲ್ಲಿ 11,985 ಜನರು ಯುವ ನಿಧಿ ಫಲಾನುಭವಿಗಳಿದ್ದು, ನೈಜತೆ ಪರಿಶೀಲನೆ ವೇಳೆ 697 ಮಂದಿಯನ್ನು ಅನರ್ಹರೆಂದು ಪತ್ತೆಹಚ್ಚಿ ಪಟ್ಟಿಯಿಂದ ಕೈ ಬಿಡಲಾಗಿದೆ. ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯ ಸೌಲಭ್ಯ ಸಿಗುವಂತೆ ಮಾಡಲು ಪ್ರತಿ ತಿಂಗಳು ನೈಜತೆಯ ಪರಿಶೀಲನೆ ನಡೆಸಲಾಗುತ್ತಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚನ್ನಪ್ಪಗೌಡ ಗೌಡರ ಪ್ರತಿಕ್ರಿಯಿಸಿದ್ದಾರೆ.