ದಂಡ ಪಾವತಿಗೆ ಸಾರಿಗೆ ಇಲಾಖೆಯಿಂದ ಶೇ. 50 ರಿಯಾಯಿತಿ RTO fine

ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ. 50ರಷ್ಟು ರಿಯಾಯಿತಿ RTO fine discount
ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ. 50ರಷ್ಟು ರಿಯಾಯಿತಿ RTO fine discount
Published on
ಧಾರವಾಡ: ನಿಮ್ಮ ವಾಹನದ ಮೇಲೆ ಆರ್​ಟಿಒ ಅಧಿಕಾರಿಗಳಿಂದ ಪ್ರಕರಣ ದಾಖಲಾಗಿವೆಯೇ? ದುಬಾರಿ ದಂಡ ಭರಿಸಲು ಆಗದೆ ಅಧಿಕಾರಿಗಳ ಕಣ್ತಪ್ಪಿಸಿ ಸಂಚರಿಸುತ್ತಿದ್ದೀರಾ? ದಂಡದಿಂದ ಮುಕ್ತವಾಗಲು ಸಾರಿಗೆ ಇಲಾಖೆ ನಿಮಗೊಂದು ಸುವರ್ಣಾವಕಾಶ ನೀಡಿದೆ. ಮೋಟಾರು ವಾಹನ ಕಾಯ್ದೆಯಡಿ ನಿಯಮ ಉಲ್ಲಂನೆ ಸಂಬಂಧ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ. 50ರಷ್ಟು ರಿಯಾಯಿತಿ ನೀಡಿದೆ!
ವಾಹನಗಳ ಮೇಲೆ ಸಂಚಾರಿ ಇ& ಚಲನ್​ನಲ್ಲಿ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಪೊಲೀಸ್​ ಇಲಾಖೆ ಇತ್ತೀಚೆಗೆ ಶೇ. 50ರಷ್ಟು ರಿಯಾಯಿತಿ ನೀಡಿತ್ತು. ಇದಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಸಾರಿಗೆ ಇಲಾಖೆ ಅರ್ಧ ದಂಡ ಭರಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ನ. 21ರಿಂದ ಡಿ. 12ರವರೆಗೆ ಕಾಲಾವಕಾಶ ನೀಡಿದೆ. 1991&92ನೇ ಸಾಲಿನಿಂದ 2019& 20ರವರೆಗಿನ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸಲಿದೆ.
* ಯಾವ ಪ್ರಕರಣಗಳು...?
ಮೋಟಾರು ವಾಹನ ಕಾಯ್ದೆ (1998) ಅನ್ವಯ ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ನಿರೀಕ್ಷಕರು ವಾಹನಗಳ ಮೇಲೆ ಪ್ರಕರಣ ದಾಖಲಿಸುತ್ತಾರೆ. ವಾಹನಗಳ ಸೂಕ್ತ ದಾಖಲಾತಿ& ಲೈಸೆನ್ಸ್​& ಹೊಗೆ ಮುಕ್ತ ಪ್ರಮಾಣಪತ್ರ ಇಲ್ಲದಿರುವುದು, ನೋಂದಣಿ ನವೀಕರಣ ಆಗದಿರುವುದು, ತೆರಿಗೆ ಪಾವತಿಸದಿರುವುದು, ರಹದಾರಿ ಪ್ರಮಾಣಪತ್ರ ಇಲ್ಲದಿರುವುದು, ನಿಗದಿಗಿಂತ ಹೆಚ್ಚಿನ ತೂಕದ ಸಾಮಗ್ರಿ ಸಾಗಣೆ, ಗೂಡ್ಸ್​ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಸೇರಿ ಇತರ ನಿಯಮ ಉಲ್ಲಂನೆಯಾದರೆ ಪ್ರಕರಣ ದಾಖಲಾಗುತ್ತವೆ.
* 2,945 ಪ್ರಕರಣ ಬಾಕಿ:
ಹುಬ್ಬಳ್ಳಿ& ಧಾರವಾಡ ಸಾರಿಗೆ ಇಲಾಖೆಯಲ್ಲಿ 1991ರಿಂದ 2020ರ ಮಾ. 31ರವರೆಗೆ 2,945 ಪ್ರಕರಣಗಳು ಬಾಕಿ ಇವೆ. ಈ ಅವಧಿಯ ಪ್ರಕರಣಗಳಿಗೆ ಶೇ. 50ರಷ್ಟು ರಿಯಾಯಿತಿ ಸಿಗಲಿದೆ. ದಂಡ ಕಟ್ಟಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಸಾರಿಗೆ ಇಲಾಖೆಯಿಂದ ಇದೇ ಮೊದಲ ಬಾರಿ ರಿಯಾಯಿತಿ ಕಲ್ಪಿಸಿದೆ. ದಂಡ ಪಾವತಿ ಮಾಡಲು ಆನ್​ಲೈನ್​ ವ್ಯವಸ್ಥೆ ಇಲ್ಲ. ಕಚೇರಿಗೆ ತೆರಳಿ ದಂಡ ಪಾವತಿಸಬೇಕು. 3,500 ರೂಪಾಯಿ ಒಳಗಿನ ದಂಡಕ್ಕೆ ನಗದು, ಅದಕ್ಕಿಂತ ಮೇಲ್ಪಟ್ಟ ದಂಡಕ್ಕೆ ಡಿಡಿ ನೀಡಬೇಕು ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.
ವಾಹನ ಹರಾಜಿಗೆ ಕ್ರಮ
ಧಾರವಾಡ ಪೂರ್ವ ಹಾಗೂ ಧಾರವಾಡ ಪಶ್ಚಿಮ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ 2020ರಿಂದ 2025ರವರೆಗೆ ಸುಮಾರು 10,000 ದಂಡ ಪಾವತಿ ಬಾಕಿ ಇದೆ. ಈ ಅವಧಿಯ ವಾಹನ ಸವಾರರಿಗೂ ನೋಟಿಸ್​ ಮೂಲಕ ದಂಡ ಪಾವತಿಗೆ ಸೂಚನೆ ನೀಡಲಾಗುತ್ತಿದೆ. ಪ್ರತಿ 3 ತಿಂಗಳಿಗೊಮ್ಮೆ ತೆಮಾಸಿಕ ತೆರಿಗೆ ವಸೂಲಾತಿ ಅಭಿಯಾನ ನಡೆಸಲಾಗುತ್ತಿದೆ. ದಂಡ ಭರಿಸದಿರುವರಿಗೆ ಇಲಾಖೆಯಿಂದ ಮುನ್ಸೂಚನೆ ನೀಡಿ ವಾಹನ ಹರಾಜಿಗೂ ಕ್ರಮ ಕೈಗೊಳ್ಳಲಾಗುತ್ತಿದೆ.
ಮೋಟಾರು ವಾಹನ ಕಾಯ್ದೆಯಡಿ ಬಸ್​, ಲಾರಿ ಆಟೋ, ಬೈಕ್​ ಹಾಗೂ ಇತರ ವಾಹನಗಳ ಮೇಲೆ 2,945 ಪ್ರಕರಣಗಳು ದಾಖಲಾಗಿವೆ. 1991&92ನೇ ಸಾಲಿನಿಂದ 2019& 20ರವರೆಗಿನ ಪ್ರಕರಣಗಳಿಗೆ ಮಾತ್ರ ಶೇ. 50ರಷ್ಟು ರಿಯಾಯಿತಿ ಅನ್ವಯವಾಗುತ್ತದೆ. ವಾಹನಗಳ ಮಾಲೀಕರಿಗೆ ಈಗಾಗಲೇ ನೋಟಿಸ್​ ನೀಡಲಾಗಿದೆ. ದಂಡ ಪಾವತಿಗಾಗಿ ಪ್ರತ್ಯೇಕ ಕೌಂಟರ್​ ತೆರೆಯಲಾಗಿದೆ. ಡಿ. 12ರವರೆಗೆ ಕಾಲಾವಕಾಶವಿದ್ದು, ವಾಹನಗಳ ಮಾಲೀಕರು ಇದರ ಸದುಪಯೋಗ ಪಡೆಯಬೇಕು.
& ಶ್ರೀಕಾಂತ ಬಡಿಗೇರ, ಹುಬ್ಬಳ್ಳಿ& ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net