ಧಾರವಾಡ: ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಕ ವಕೀಲರ ರಾಜ್ಯಮಟ್ಟದ 2ನೇ ಸಮ್ಮೇಳನ ಧಾರವಾಡ ಕೆಲಗೇರಿ ರಸ್ತೆಯ ಬಿ.ಡಿ. ಪಾಟೀಲ ಕನ್ವೆಷನ್ ಹಾಲ್‌ನಲ್ಲಿ ಫೆ.1ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಸ್. ಅರುಣಕುಮಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸುವರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಆದಿಜಾಂಭವ ಅಭಿವೃದ್ಧಿ ನಿಮಗದ ಅಧ್ಯಕ್ಷ ಜಿ.ಎಸ್. ಮಂಜುನಾಥ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮ್ಮೇಳನದಲ್ಲಿ ವಿಶ್ರಾಂತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲಕುಮಾರ್ ಹಾಗೂ ಐಆರ್‌ಎಸ್ ಅಽಕಾರಿ ಭೀಮಾಶಂಕರ ಭಾಗವಹಿಸುವರು. ಸಾವಿರಕ್ಕೂ ಅಧಿಕ ವಕೀಲರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಪರಿಶಿಷ್ಟ ಜಾತಿ (ಎಸ್.ಸಿ)ಯ ಪ್ರತ್ಯೇಕ ಒಳಮೀಸಲಾತಿಯಲ್ಲಿ ಮಾದಿಗರಿಗೆ ಶೇ. 50ರಷ್ಟು ನೀಡಬೇಕು. ಅಲೆಮಾರಿಗರನ್ನು ಬಿಟ್ಟರೆ ಮಾದಿಗ ಸಮುದಾಯ ಕೆಳಮಟ್ಟದಲ್ಲಿದೆ ಮತ್ತು ಮಾದಿಗರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನ್ಯಾಯಯುತವಾಗಿ ಮಾದಿಗರಿಗೆ ಸಿಗಬೇಕಾದ ಸಂಪೂರ್ಣ ಒಳಮೀಸಲಾತಿ ದೊರೆತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2025ರ ಡಿಸೆಂಬರ್‌ನಲ್ಲಿ ಹೊರಡಿಸಿದ ಒಳಮೀಸಲಾತಿ ಆದೇಶ ಮಾದಿಗರ ಪಾಲಿಕೆ ಮರಣ ಶಾಸನವಾಗಿದೆ. ನಮ್ಮ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಒಳಮೀಸಲಾತಿ ಪಾಲು ಸಿಗುವವರೆಗೂ ಹೋರಾಡುತ್ತೇವೆ ಎಂದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಬೀದಿತಿಟ್ಟು ರಾಜೇಂದ್ರ, ಮಾದಿಗ ಪದವೀಧರರ ಸಂಘದ ಅಧ್ಯಕ್ಷ ಚಂದ್ರಪ್ಪ ಹಾದಿಮನಿ, ಚಂದ್ರಶೇಖರ ನಡುವಿನಮನಿ, ಎಸ್. ಮಾಳಪ್ಪ, ನಾಗರತ್ನಾ ಪೂಜಾರ, ಎಸ್.ಎನ್. ಚಿಕ್ಕಣ್ಣವರ ಸುದ್ದಿಗೋಷ್ಠಿಯಲ್ಲಿದ್ದರು.