bus stop 2 ಕೋಟಿ ರೂ. ವೆಚ್ಚದ ಬಸ್‌ ನಿಲ್ದಾಣ ವೇಸ್ಟ್!

ಹುಬ್ಬಳ್ಳಿ ಹೊಸೂರ ಕ್ರಾಸ್‌ನಲ್ಲಿ ತಂಗುದಾಣವಿಲ್ಲದೆ ರಸ್ತೆಯಲ್ಲೇ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು.
ಹುಬ್ಬಳ್ಳಿ ಹೊಸೂರ ಕ್ರಾಸ್‌ನಲ್ಲಿ ತಂಗುದಾಣವಿಲ್ಲದೆ ರಸ್ತೆಯಲ್ಲೇ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು.
Published on
ಹುಬ್ಬಳ್ಳಿ: ನಗರದಲ್ಲಿಫ್ಲೈವರ್ (ಮೇಲ್ಸೇತುವೆ) ಕಾಮಗಾರಿ ಆರಂಭವಾದಾಗಿನಿಂದ ಸಾರ್ವಜನಿಕರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಅವೈಜ್ಞಾನಿಕ ಕಾಮಗಾರಿ, ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲದಿರುವುದು, ಬೇಕಾಬಿಟ್ಟಿ ಕೆಲಸ ಹೀಗೆ ಅನೇಕ ಅವಾಂತರಗಳಿಂದಾಗಿ ಜನರಿಗೆ ಯಾವುದೇ ಸುರಕ್ಷತೆ ಎಂಬುದು ಇಲ್ಲದಾಗಿದೆ.

ಈಗಾಗಲೇ ಹಳೇ ಬಸ್ ನಿಲ್ದಾಣ ಎದುರಿನ ಬಿಆರ್‌ಟಿಎಸ್ ಬಸ್ ನಿಲ್ದಾಣ bus stop ತೆರವು ಮಾಡಲಾಗಿದ್ದು, ಇದೀಗ ಹೊಸೂರ ಕ್ರಾಸ್‌ನಲ್ಲಿರುವ ಮತ್ತೊಂದು ಚಿಗರಿ ನಿಲ್ದಾಣವನ್ನು ಕಿತ್ತು ಹಾಕಲಾಗುತ್ತಿದೆ. ಪ್ರತಿಯೊಂದಕ್ಕೂ ಕನಿಷ್ಠ ತಲಾ ಒಂದು ಕೋಟಿ ರೂ. ಖರ್ಚು ಮಾಡಲಾಗಿತ್ತು.

ಒಂದೆಡೆ ಸಾರ್ವಜನಿಕರ ತೆರಿಗೆ ಹಣದ ಅಪವ್ಯಯ, ಇನ್ನೊಂದೆಡೆ ಸಮರ್ಪಕ ಕಾಮಗಾರಿ ಕೈಗೊಳ್ಳದೆ ಜನರ ಆರೋಗ್ಯದ ಜತೆಗೂ ಚೆಲ್ಲಾಟ ಆಡಲಾಗುತ್ತಿದೆ.
ಸದ್ಯ ಹೊಸೂರ ಕ್ರಾಸ್‌ನಲ್ಲಿ ಬಸ್ ನಿಲ್ದಾಣ ಇಲ್ಲದೆ ಹೊರಗಡೆ ಕಾಯುತ್ತಿರುವ ಜನರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮೊದಲೇ ಕಾಲಮಿತಿ ಇಲ್ಲದ ಕಾಮಗಾರಿಯಿಂದಾಗಿ ನೂರೆಂಟು ಸಮಸ್ಯೆಗೆ ಸಿಲುಕಿರುವ ಜನರು ಕನಿಷ್ಠ ಮೂಲ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದಾರೆ. ಅಧಿಕಾರಿಗಳ ಅನಾದರದಿಂದಾಗಿ ಹುಬ್ಬಳ್ಳಿಗೆ ಬಂದವರು ‘ಸಾಕಪ್ಪ ಸಾಕು ಈ ಊರಿನ ಸಹವಾಸ’ ಎಂದು ಜಾಗ ಖಾಲಿ ಮಾಡುವಂತೆ ಮಾಡಿದೆ.
2024ರ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿದ್ದ ಫ್ಲೈವರ್ ಕಾಮಗಾರಿ ಕಾಲಮಿತಿ ವಿಸ್ತರಿಸಿಕೊಳ್ಳುತ್ತ ಈಗ ಮತ್ತೆರಡು ವರ್ಷ ಮುಂದಕ್ಕೆ ಬಂದಿದೆ. ಈಗಲೂ ಅಧಿಕಾರಿಗಳಿಗೆ ಇದು ಯಾವಾಗ ಪೂರ್ಣಗೊಳ್ಳಬಹುದು ಎಂಬುದು ಸ್ಪಷ್ಟತೆ ಇಲ್ಲ. ಹಾಗಾಗಿ ಇಂದು ಮುಗಿದೀತು, ನಾಳೆ ಮುಗಿದೀತು... ಎಂದು ಕಾಯುತ್ತಿರುವವರಿಗೆ ನಿರಾಶೆಯ ಮೇಲೆ ನಿರಾಸೆ ಉಂಟಾಗುತ್ತಿದೆ.
ಬಿಸಿಲಲ್ಲೇ ಕಾಯಬೇಕು: ಹೊಸೂರ ಕ್ರಾಸ್ ನಲ್ಲಿದ್ದ ಬಿಆರ್‌ಟಿಎಸ್ ಬಸ್ ನಿಲ್ದಾಣ ತೆರವು ಮಾಡಲಾಗುತ್ತಿದೆ. ಬಿಆರ್‌ಟಿಎಸ್ ಯೋಜನೆ ಜಾರಿಯಾದ ಮೇಲೆ ಅವಳಿ ನಗರ ಮಧ್ಯೆ ಯಾವುದೇ ಬಸ್ ನಿಲ್ದಾಣಗಳನ್ನು ಉಳಿಸಿಕೊಂಡಿಲ್ಲ. ಇರುವುದು ಕೇವಲ ಚಿಗರಿ ನಿಲ್ದಾಣಗಳು. ಎಲ್ಲವನ್ನೂ ಅಭಿವೃದ್ಧಿ ಹೆಸರಿನಲ್ಲಿ ಕಿತ್ತು ಹಾಕಲಾಗಿದೆ.
ಇದೀಗ ಹೊಸೂರ ಸರ್ಕಲ್ ಬಸ್ ನಿಲ್ದಾಣವನ್ನೂ ತೆರವು ಮಾಡಲಾಗುತ್ತಿದೆ. ಇದಕ್ಕಾಗಿ ಚಿಗರಿ ಬಸ್‌ಗಳು ಅಲ್ಲಿ ನಿಲ್ಲುತ್ತಿಲ್ಲ. ಮುಂದೆ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ, ಇಲ್ಲವೆ ಹಳೇ ಬಸ್ ನಿಲ್ದಾಣವೇ ಚಿಗರಿಗಳಿಗೆ ಸ್ಟಾಪ್ ಆಗಿದೆ.
ಇದರಿಂದ ಪ್ರಮುಖ ಜಂಕ್ಷನ್ ಒಂದರಲ್ಲಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಫ್ಲೈವರ್ ಪಿಲ್ಲರ್ ನಿರ್ಮಾಣ ಮಾಡುತ್ತಿದ್ದು, ಅದಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ. ಬಿಸಿಲು, ಧೂಳು ತಿನ್ನುತ್ತ ಪ್ರಯಾಣಿಕರು ಇಲ್ಲಿ ನರಕ ದರ್ಶನ ಮಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net