ಅಭಿವೃದ್ಧಿ ಹೊಂದಲಿರುವ ಅಳ್ನಾವರ, ಧಾರವಾಡ ರೈಲು ನಿಲ್ದಾಣ

ALNAVARA NEW
Published on

ಹುಬ್ಬಳ್ಳಿ : ದೇಶಾದ್ಯಂತ ಅನೇಕ ರೈಲು ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯ ಅಳ್ನಾವರ ಹಾಗೂ ಧಾರವಾಡ ನಿಲ್ದಾಣಗಳನ್ನು ಸಹ ಅಮೃತ ಭಾರತ ನಿಲ್ದಾಣಗಳನ್ನಾಗಿ ಗುರುತಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಅಮೃತ ಭಾರತ ಯೋಜನೆಗಾಗಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 45 ನಿಲ್ದಾಣಗಳನ್ನು ಗುರುತಿಸಲಾಗಿದ್ದು, 16 ನಿಲ್ದಾಣಗಳು ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿವೆ ಎಂದು ಸಚಿವ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯ 16 ನಿಲ್ದಾಣಗಳಲ್ಲಿ ಒಟ್ಟು 6 ನಿಲ್ದಾಣಗಳಲ್ಲಿ ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಮೂಲಕ (ವರ್ಚುವಲ್) ಅಡಿಗಲ್ಲು ಸಮಾರಂಭ ನೆರವೇರಿಸುವರು ಎಂದು ಹೇಳಿದ್ದಾರೆ.

ಗುರುತಿಸಲಾದ ರೈಲು ನಿಲ್ದಾಣಗಳಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸುವ ಮೂಲಕ ಆದರ್ಶ ನಿಲ್ದಾಣಗಳನ್ನಾಗಿ ರೂಪಿಸಲಾಗುವುದು. ನಿಲ್ದಾಣಗಳು ಕೇವಲ ರೈಲುಗಳನ್ನು ಹತ್ತಲು ಮತ್ತು ಇಳಿಯಲು ಇರುವ ಸ್ಥಳವಲ್ಲ. ಚಿಲ್ಲರೆ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು, ಇನ್ಪೋಟೈನ್​ವೆುಂಟ್ ಮತ್ತು ವಿರಾಮವನ್ನು ಉತ್ತೇಜಿಸುವ ನಗರ ಕೇಂದ್ರಗಳಾಗಿ ಹೊರಹೊಮ್ಮಬೇಕು ಎಂಬುದು ಪ್ರಧಾನಿಯವರ ದೂರದೃಷ್ಟಿಯಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಅಮೃತ ಭಾರತ ರೈಲು ನಿಲ್ದಾಣಗಳ ಯೋಜನೆಯನ್ವಯ ಅಳ್ನಾವರ ನಿಲ್ದಾಣ ಸುಸಜ್ಜಿತವಾಗಲಿದ್ದು, ಗ್ರಾನೈಟ್ ಫ್ಲೋರಿಂಗ್, ಫುಟ್ ಓವರ್ ಬ್ರಿಡ್ಜ್, ಎಸ್ಕಲೇಟರ್, ಹೊಸ ವೇಟಿಂಗ್ ಹಾಲ್ ಮುಂತಾದ ಹಲವಾರು ಸೌಲಭ್ಯಗಳು ಲಭಿಸಲಿವೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net