

ಧಾರವಾಡ: ಪೂಜ್ಯ ಶ್ರೀ ಅಲ್ಲೀಪುರ ಮಹಾದೇವ ತಾತನವರು ಮಾನವ ಕುಲದ ಉದ್ಧಾರಕ್ಕಾಗಿ ಅವತರಿಸಿ ಬಂದ ಮಹಾಶಿವಯೋಗಿಗಳು ಎಂದು ಬಳೂಟಗಿಯ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಜೀವಗಾಂಧಿನಗರದಲ್ಲಿರುವ ಶ್ರೀ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ಮಹಾದೇವ ತಾತನವರ 37ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚವನ ನೀಡಿದರು. ತಾತನವರು ಭಕ್ತರ ಏಳಿಗೆಗಾಗಿ ಬದುಕಿದ ಪುಣ್ಯಪುರುಷರು. ಸಮಾಜದ ಉದ್ಧಾರಕ್ಕಾಗಿ ತಮ್ಮನೇ ತಾವು ಸಮರ್ಪಿಸಿಕೊಂಡವರು. ಅವರೊಬ್ಬ ತ್ರಿಕಾಲ ಜ್ಞಾನಿಗಳು ಮಾತ್ರವಲ್ಲ, ಪವಾಡ ಪುರುಷರೂ ಆಗಿದ್ದರು. ನಂಬಿ ಬಂದ ಭಕ್ತರಲ್ಲಿ ಸದಾಕಾಲ ನೆಲೆನಿಂತು ಮಹಾನ್ ಯೋಗಿಗಳಾಗಿದ್ದರು ಎಂದರು.
ಇಂಥ ಪುಣ್ಯ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನೀವೇ ಪುಣ್ಯವಂತರು ಎಂದು ನವವಧುರರಿಗೆ ಶುಭ ಕೋರಿದ ಶ್ರೀಗಳು, ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಜೀವನ ನಡೆಸಬೇಕು. ಹಿರಿಯರಿಗೆ ಗೌರವ ಕೊಡಬೇಕು. ಅತ್ತೆ, ಮಾವಂದಿರನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಶ್ರೀ ಮಹಾದೇವ ತಾತನವರು ನಂಬಿದ ಭಕ್ತರ ಪಾಲಿನ ಕಾಮಧೇನು ಆಗಿದ್ದರು. ಅವರು ಮಾನವ ರೂಪದ ಸಾಕ್ಷಾತ್ ಪರಮಾತ್ಮ ಸ್ವರೂಪರಾಗಿದ್ದರು. ತಮ್ಮ ಅಖಂಡ ತಪಸ್ಸಿನ ಶಕ್ತಿಯಿಂದ ಶಿವನಿಂದ ವರ ಪಡೆದಿದ್ದರು. ಅವರು ನುಡಿದ ಎಲ್ಲ ಭವಿಷ್ಯಗಳು ನಿತ್ಯಸತ್ಯವಾಗಿವೆ ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ 15 ಜೋಡಿ ನವವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ರುದ್ರೇಶ ಹರಕುಣಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಣ್ಣ ಬೆಳಗಾವಿ, ಮಂಜುನಾಥ ಬೆಳಗಾವಿ, ರುದ್ರೇಶ ಹೊಸಕೇರಿ, ಇತರರಿದ್ದರು. ಸಂತೋಷ ಆನೆಗುಂದಿ ಸ್ವಾಗತಿಸಿದರು. ಶಿದ್ಧಲಿಂಗಪ್ಪ ಹೊಸಕೇರಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.