ಕಾಮಗಾರಿ ಪೂರ್ಣಗೊಳಿಸದಿದ್ದರೆ ಅನಿರ್ಧಿಷ್ಟಾವಧಿ ಧರಣಿ

Untitled design(20)
ಚನ್ನಬಸವ ಅಮೀನಗಡ
Published on

ಮಸ್ಕಿ: ತಾಲೂಕಿನ ಅಮೀನಗಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಭೋಜನಾಲಯ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೂ 9 ಲಕ್ಷ ರೂ.ಗಳ ಬಿಲ್‌ನ್ನು ಪಾವತಿಸಲಾಗಿದೆ ಎಂದು ಅಂಬೇಡ್ಕರ್ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚನ್ನಬಸವ ಅಮೀನಗಡ ಆರೋಪಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಕಟ್ಟಡ ನಿರ್ಮಾಣಕ್ಕೆ 2021-22ನೇ ಸಾಲಿನ ಸ್ಥಾಪಿಸಲಾದ ಶಾಲಾಭಿವೃದ್ಧಿ ಕಾಮಗಾರಿ ಯೋಜನೆಯಡಿಯಲ್ಲಿ ಸುಮಾರು 12.5 ಲಕ್ಷ ಅನುಮೋದನೆಗೊಂಡಿರುತ್ತದೆ. ಕಾಮಗಾರಿ ಆರಂಭಿಸಿ ಸುಮಾರು 9 ಲಕ್ಷ ಬಿಲ್ ಪಾವತಿಸಲಾಗಿದೆ. ಆದರೆ ಕಟ್ಟಡ ಕಾಮಗಾರಿ ಅರ್ಧಕೂಡ ಮುಗಿದಿಲ್ಲ. ಇನ್ನುಳಿದ 2.7 ಲಕ್ಷ ರೂ.ದಲ್ಲಿ ಸ್ಲಾಬ, ವಿದ್ಯುತ್ ಸಂಪರ್ಕ, ಪ್ಲಾಸ್ಟಿಂಗ್, ಸುಣ್ಣ-ಬಣ್ಣ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಈಗಾಗಲೇ 80 ರಷ್ಟು ಅನುದಾನವನ್ನು ಎತ್ತಿಕೊಂಡಿದ್ದಾರೆಂದು ದೂರಿದರು.

ಬೋಗಸ್ ಬಿಲ್ ಸೃಷ್ಟಿ

ಗ್ರಾಪಂ ಪಿಡಿಒ ಮತ್ತು ಟೆಕ್ನಿಕಲ್ ಇಂಜಿನಿಯರ್ ಅವರು ಗ್ರಾಪಂ ಅಧ್ಯಕ್ಷರ ಲಾಗಿನ್ ಇಲ್ಲದೇ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯ ಲಾಗಿನ್‌ನಿಂದ ಬಿಲ್‌ನ್ನು ಪಾವತಿಸಿಕೊಂಡಿದ್ದಾರೆ. ಜೂನ್ 20 ರಂದು ತಾಪಂ ಸಹಾಯಕ ನಿರ್ದೇಶಕ ಶಿವನಾಂದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾಮಗಾರಿಯನ್ನು ಪರಿಶೀಲಿಸಿದ ನಂತರ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೂ ತಾಪಂ ಇಒ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.

ತಾಪಂ ಇಒ ಕೂಡಲೇ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಂಡು, ಅರ್ಧಕ್ಕೆ ನಿಂತಿರುವ ಸರ್ಕಾರಿ ಪ್ರೌಢ ಶಾಲೆಯ ಭೋಜನಾಲಯ ಕಟ್ಟಡವನ್ನು ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ಸಂಘಟನೆ ವತಿಯಿಂದ ಗ್ರಾಪಂ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಂಘ ತಾಲೂಕಾಧ್ಯಕ್ಷ ಅಂಬಣ್ಣ ಮಲ್ಲಾಪುರು, ಪ್ರಮುಖರಾದ ಮೌನೇಶ ರಾಗಲಪರ್ವಿ, ನಾಗಲಿಂಗ ಜವಳಗೇರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net