ಬಾರ್ ತೆರೆಯಲು ಅನುಮತಿ ನೀಡದಂತೆ ಧರಣಿ

Oplus_131072
ನಂಜನಗೂಡು ಪಟ್ಟಣದ ದೇವಿರಮ್ಮನಹಳ್ಳಿ ಗೇಟ್ ಬಳಿ ಬಾರ್ ತೆರೆಯಲು ಅವಕಾಶ ನೀಡದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ವೀರಶೈವ ಮುಖಂಡ ಸಿಂಧುವಳ್ಳಿ ಕೆಂಪಣ್ಣ, ಬಸವಣ್ಣ, ವಿದ್ಯಾರ್ಥಿ ಮುಖಂಡ ಮನೋಜ್, ಮಲ್ಕುಂಡಿ ಮಹದೇವಸ್ವಾಮಿ, ಮಹೇಶ್ ಮತ್ತಿತರರು ಇದ್ದರು.
Published on

ನಂಜನಗೂಡು: ಪಟ್ಟಣದ ದೇವಿರಮ್ಮನಹಳ್ಳಿ ಗೇಟ್ (ಬಸವೇಶ್ವರ ವೃತ್ತ) ಬಳಿ ಬಾರ್ ತೆರೆಯಲು ಅನುಮತಿ ನೀಡಬಾರದೆಂದು ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರು ಮತ್ತು ಗುಂಡ್ಲುಪೇಟೆ ಸಂಪರ್ಕ ಕಲ್ಪಿಸುವ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು, ರೈತ ಸಂಘಟನೆಗಳ ಕಾರ್ಯಕರ್ತರು, ವೀರಶೈವ ಬಳಗದ ಪ್ರತಿಭಟನಾಕಾರರು ಕೆಲಕಾಲ ವಾಹನಗಳ ಸಂಚಾರ ತಡೆದು ತಾಲೂಕು ಆಡಳಿತ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಮುಖಂಡ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ಸುಮಾರು 250 ಮೀಟರ್ ಅಂತರದಲ್ಲಿ ತಾಲೂಕು ಆಡಳಿತ ಕಚೇರಿ ಇದೆ. ಶಾಲಾ-ಕಾಲೇಜುಗಳಿವೆ. ಶರಣರ ಸಂಗಮ ಮಠ ಇದೆ. ಸಾಯಿಬಾಬಾ ದೇವಸ್ಥಾನ ಇದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಗುಂಡ್ಲುಪೇಟೆ, ಮೈಸೂರು ಮತ್ತು ಸುಮಾರು 20 ಗ್ರಾಮಗಳಿಗೆ ತೆರಳುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಬಾರ್‌ಗೆ ಅನುಮತಿ ಕೊಡುವುದರಿಂದ ಸ್ಥಳೀಯ ಪರಿಸರ ಕಲುಷಿತವಾಗುತ್ತದೆ. ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಪುಟ್ಟತಾಯಮ್ಮ ಸೋಮಣ್ಣ ಕಾಂಪ್ಲೆಕ್ಸ್ ಆವರಣದಲ್ಲಿ ಬಾರ್ ತೆರೆಯಲು ಅನುಮತಿ ನೀಡದಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು. ನಂತರ ತಾಲೂಕು ಗ್ರೇಡ್-2 ತಹಸೀಲ್ದಾರ್ ಮಹೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ವೀರಶೈವ ಮುಖಂಡ ಬಸವಣ್ಣ, ವಿದ್ಯಾರ್ಥಿ ಮುಖಂಡ ಮನೋಜ್, ಮಲ್ಕುಂಡಿ ಮಹದೇವಸ್ವಾಮಿ, ಮಹೇಶ್, ಕಸುವಿನಹಳ್ಳಿ ಮಂಜೇಶ್, ಹದಿನಾರು ಭುಜಂಗಪ್ಪ, ಪ್ರಭು, ಕುಮಾರ್, ರಾಜೇಂದ್ರ ಪ್ರಸಾದ್, ಮಹದೇವಸ್ವಾಮಿ, ನಂಜಮಣಿ ಗುರುಮಲ್ಲಪ್ಪ, ಕುರಿಹುಂಡಿ ಮಂಜು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net