ನ.೧ ರಂದು ಸಿಎನ್‌ಸಿ ಯಿಂದ ಧರಣಿ ಸತ್ಯಾಗ್ರಹ

N.U.NACHAPPA
Published on

ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆ ಬೇಡಿಕೆಯನ್ವಯ ೨ನೇ ರಾಜ್ಯ ಮರು ಸಂಘಟನೆ ಆಯೋಗ ರಚಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.೧ ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗ್ಗೆ ೧೦.೩೦ ಗಂಟೆಯಿಂದ ಒಂದು ಗಂಟೆ ಕಾಲ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ೯ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿರವರು ಕೊಡವ ಲ್ಯಾಂಡ್ ಪರವಾಗಿ ಆಯೋಗವೊಂದನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.


ಸಂವಿಧಾನದ ೭ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಮರು-ಸಂಘಟನಾ ಕಾಯಿದೆ ೧೯೫೬ ರ ಒಪ್ಪಂದಗಳಿಗೆ ರಾಜ್ಯವು ಬದ್ಧವಾಗಿಲ್ಲ. ಸಿ ರಾಜ್ಯವಾಗಿದ್ದ ಕೂರ್ಗ್ ೧೯೫೬ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡವರನ್ನು ರಾಜ್ಯದ ೨ನೇ ದರ್ಜೆಯ ವರ್ಣಭೇದ ನೀತಿಯ ನಾಗರಿಕರಂತೆ ಪರಿಗಣಿಸಲಾಗಿದೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.


ಕೊಡವರು ಕೊಡವ ಪ್ರದೇಶದ ಮೂಲನಿವಾಸಿ ಸ್ಥಳೀಯ ಬುಡಕಟ್ಟು ಜನರಾಗಿರುವುದರಿಂದ ಆಂತರಿಕ ರಾಜಕೀಯ-ಸ್ವಯಂ-ನಿರ್ಣಯದ ಹಕ್ಕುಗಳು, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಸೇರಿದಂತೆ ೯ ನ್ಯಾಯಸಮ್ಮತವಾದ ಬೇಡಿಕೆಗಳ ಬಗ್ಗೆ ಧರಣಿಯಲ್ಲಿ ಗಮನ ಸೆಳೆಯಲಾಗುತ್ತದೆ. ಸಿಎನ್‌ಸಿ ಸದಸ್ಯರು ಹಾಗೂ ಕೊಡವ, ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net