ಸಾಲಿಗ್ರಾಮ ತಾಲೂಕು ಕಚೇರಿ ಮುಂದೆ ಧರಣಿ

18 sali 1
Published on

ಸಾಲಿಗ್ರಾಮ: ಚುಂಚನಕಟ್ಟೆ ಗ್ರಾಮದ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ತಹಸೀಲ್ದಾರ್ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು.

ತಹಸೀಲ್ದಾರ್ ನರಗುಂದ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯನ್ನು ಸಮಿತಿ ರಾಜ್ಯ ಸಂಚಾಲಕ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

ಚುಂಚನಕಟ್ಟೆ ಗ್ರಾಮದಲ್ಲಿ 40 ವರ್ಷಗಳಿಂದಲೂ ವಾಸ ಮಾಡುತ್ತಿರುವ 85ಕ್ಕೂ ಹೆಚ್ಚು ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ನಿವೇಶನ ಮತ್ತು ಆಶ್ರಯ ಮನೆ ಕೊಡಿಸಲು ಸಮಿತಿ ಸಾಕಷ್ಟು ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಈಗಾಗಲೇ ಈ ಸಂಬಂಧ ಹುಣಸೂರು ವಿಭಾಗ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಸ್ಥಳವನ್ನು ಪರಿಶೀಲಿಸಿದ ವಿಭಾಗಾಧಿಕಾರಿಗಳು ಹಲವು ವರ್ಷಗಳಿಂದ ವಾಸವಿರುವ ಕುಟುಂಬಕ್ಕೆ ನಿವೇಶನ ನೀಡಬಹುದು ಎಂದು ಭರವಸೆ ನೀಡಿದ್ದರು.

ಆದರೆ ಸಾಲಿಗ್ರಾಮ ತಹಸೀಲ್ದಾರ್ ನರಗುಂದ ಅವರು ಇಲ್ಲಿನ ಪರಿಸ್ಥಿತಿ ಪರಿಶೀಲಿಸದೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಅನ್ಯಾಯ ಮಾಡಲು ಜಿಲ್ಲಾಧಿಕಾರಿ ಸಭೆಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ್ಟರ ಸಮಸ್ಯೆಗಳ ಬಗ್ಗೆ ಪೊಲೀಸರು ಸ್ಪಂದಿಸುತ್ತಿಲ್ಲ. ಜತೆಗೆ ಎಸ್ಸಿ, ಎಸ್ಟಿ ಸಭೆಗೆ ಸಮುದಾಯದ ಪ್ರಮುಖರಿಗೆ ಆಹ್ವಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘ ತಾಲೂಕು ಭವನ ನಿರ್ಮಾಣ ಮಾಡಲು ನಿವೇಶನ ನೀಡುವ ಬಗ್ಗೆ ಕಡತಗಳನ್ನು ನೀಡಿ ಎರಡು ವರ್ಷಗಳಾಗಿದೆ. ಆದರೆ ತಾಲೂಕು ಕಚೇರಿಯಲ್ಲಿ ಕಡತಗಳೇ ಕಾಣುತ್ತಿಲ್ಲ. ಕೇಳಿದರೆ ಹುಡುಕಿಸಿ ಕೊಡುತ್ತೇನೆ ಎಂಬ ಉತ್ತರವನ್ನು ವರ್ಷದಿಂದ ನೀಡುತ್ತಿದ್ದಾರೆ. ವಾರದೊಳಗೆ ಕಡತ ಸಿಗದಿದ್ದರೆ ತಾಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಗ್ರೇಡ್-2 ತಹಸೀಲ್ದಾರ್ ಸಣ್ಣರಾಮಪ್ಪ ಅವರಿಗೆ ಮನವಿ ನೀಡಿದರು. ಎಸ್ಸಿ, ಎಸ್ಟಿ ಜಾಗೃತಿ ಸಮಿತಿ ಜಿಲ್ಲಾ ಸಂಚಾಲಕ ಹೆಬ್ಬಾಳ್ ದಿವಾಕರ್, ಮುಖಂಡರಾದ ಚಂದ್ರು, ಗ್ರಾಮ ಪಂಚಾಯಿತಿ ಸದಸ್ಯ ರಾಂಪುರ ಲೋಕೇಶ್, ಸಂತೋಷ್, ಹರದನಹಳ್ಳಿ ಮಂಜು, ಮನುಗನಹಳ್ಳಿ ದೇವರಾಜ, ಬಸವರಾಜು, ಸುಧಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net