28ರಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಮುಂದೆ ಧರಣಿ

protest-fist-sketch-22337688
Published on

ಸೋಮವಾರಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.28 ರಂದು ಮಡಿಕೇರಿಯಲ್ಲಿರುವ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಹೇಳಿದರು.

ಗ್ರಾಮ ಪಂಚಾಯಿತಿ ನೌಕರರಾದ ಗುಮಾಸ್ತ, ಕರವಸೂಲಿಗಾರ, ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಪಂಪ್ ಆಪರೇಟರ್, ಜವಾನ, ಕಸ ಗುಡಿಸುವವರಿಗೆ ದುಡಿಮೆಗೆ ತಕ್ಕ ವೇತನ ನೀಡದೆ ಜೀತಾದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜಿಲ್ಲೆಯಲ್ಲಿರುವ 103 ಗ್ರಾಮ ಪಂಚಾಯಿತಿಗಳಲ್ಲಿ 250 ಹುದ್ದೆಗಳು ಖಾಲಿ ಇವೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಯಿಲ್ಲ. ಹಾಗಾಗಿ ಸಭೆಯಲ್ಲಿ ಪಿಡಿಒಗಳೇ ಟೀ, ಕಾಫಿ ಕೊಡಬೇಕಾದ ದುಸ್ಥಿತಿ ಇದೆ. ಆದರೂ ಪಂಚಾಯತ್ ರಾಜ್ ಇಲಾಖೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ವೈಜ್ಞಾನಿಕ ಕನಿಷ್ಠ ವೇತನವೂ ಇಲ್ಲದೆ, ಕಡಿಮೆ ಸಂಬಳಕ್ಕೆ ಒತ್ತಡದ ಹೆಚ್ಚಿನ ಕೆಲಸವನ್ನು ಮಾಡಬೇಕಿದೆ. 2016ರಲ್ಲಿ ಅತ್ಯಲ್ಪ ವೇತನವನ್ನು ಜಾಸ್ತಿ ಮಾಡಿದ್ದು ಬಿಟ್ಟರೆ, ಇಲ್ಲಿಯವರೆಗೆ ವೇತನ ಹೆಚ್ಚು ಮಾಡಿಲ್ಲ. ನೌಕರರಿಗೆ ಕುಟುಂಬವನ್ನು ಸಾಕುವುದಕ್ಕೆ ಸಮಸ್ಯೆಯಾಗಿದೆ. ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಮೂಲವೇತನ 38,021 ರೂ., ನೀರುಗಂಟಿ, ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಳಿಗೆ 33,062 ರೂ., ಹಾಗೂ ಜವಾನರಿಗೆ 28,750 ರೂ. ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರಲ್ಲದೆ, ಸಿಬ್ಬಂದಿಗೆ ಸೇವಾ ಹಿರಿತನದ ಮಾನ್ಯತೆ ನೀಡಿ ಮೂಲವೇತನಕ್ಕೆ ಶೇ.2 ರಷ್ಟು ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಕಷ್ಟಪಟ್ಟು ದುಡಿದವರಿಗೆ ನಿವೃತ್ತಿ ವೇತನ ನೀಡದೆ ಬರಿಗೈಯಲ್ಲಿ ಕಳುಹಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಲ್ಲಿರುವ ಮೊಕದ್ದಮೆಗಳಿಗೆ ಪಿಡಿಒ ಹಾಜರಾಗದ ಕಾರಣ ನಿವೃತ್ತರಿಗೆ ನ್ಯಾಯವೂ ವಿಳಂಬವಾಗುತ್ತಿದೆ. ಕನಿಷ್ಠ ವೇತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ. ಇನ್ನು ಮುಂದೆ ಹೋರಾಟದ ಮೂಲಕ ನ್ಯಾಯ ಪಡೆಯಬೇಕಾಗಿದೆ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಎಚ್.ಆರ್.ಮಂಜು, ಎಂ.ಎ.ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net