

ಚಿಕ್ಕಮಗಳೂರು: ಭೂಹೀನ ದಲಿತರಿಗೆ ಭೂಮಿ, ನಿವೇಶನ ರಹಿತರಿಗೆ ನಿವೇಶನ ಹಾಗೂ ವಸತಿ ನೀಡುವಂತೆ ಆಗ್ರಹಿಸಿ ಸಿಪಿಐ ವಿವಿಧ ವಲಯಗಳಲ್ಲಿ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ತಾಲೂಕು ಸಮಿತಿ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎಲ್ಲ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಪಕ್ಷದ ಎಲ್ಲ ಶಾಖೆಗಳು ತಕ್ಷಣ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಲಾಗಿದೆ ಎಂದು ಹೇಳಿದರು.
ಆಲ್ದೂರು ವಲಯ ಸಮಿತಿಯಿಂದ ಆಗಸ್ಟ್ ೨೪ ರಂದು ಆಲ್ದೂರು ನಾಡಕಚೇರಿ ಮುಂದೆ ಪ್ರತಿಭಟನೆ ಹಾಗು ಸಮಾವೇಶ ನಡೆಸಬೇಕು. ಆಗಸ್ಟ್ ೧೯ರಂದು ಶಿರವಾಸೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಲು ಸಿಪಿಐ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಆವುತಿ ವಲಯ ಸಮಿತಿಯಿಂದ ಆಗಸ್ಟ್ ೨೬ರಂದು ಬ್ಯಾರವಳ್ಳಿ ಗ್ರಾಪಂ ಮುಂದೆ ಹಾಗೂ ಆಗಸ್ಟ್ ೩೦ರಂದು ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ನಗರ ಸಮಿತಿಯಿಂದ ಆಗಸ್ಟ್ ೨೮ ರಂದು ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ೪೮ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಪಂಚಾಯಿತಿಗೆ ೪ ಎಕರೆ ಜಮೀನು ಮೀಸಲಿಟ್ಟು ನಿವೇಶನ ನೀಡಲು ಜಿಲ್ಲಾಡಳಿತ ಆದೇಶ ಹೊರಡಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನು ಈಡೇರಿಸದಿದ್ದರೆ ಸೆಪ್ಟೆಂಬರ್ ೧೫ ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಿಪಿಐ ತಾಲೂಕು ಸಮಿತಿಯ ಸಹ ಕಾರ್ಯದರ್ಶಿ ಹೆಡದಾಳ್ ಕುಮಾರ್, ನಗರ ಸಹ ಕಾರ್ಯದರ್ಶಿ ಎಚ್.ಕೆ ಸೋಮೇಗೌಡ ಉಪಸ್ಥಿತರಿದ್ದರು.