ಧರಣಿದೇವಿ ಶ್ರೇಷ್ಠ ಬರಹಗಾರ್ತಿ

27 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಹಕ್ಕಿಂತ ಮನಸ್ಸು ಶಕ್ತಿಶಾಲಿಯಾದದ್ದು. ಡಾ. ಧರಣಿದೇವಿ ಮಾಲಗತ್ತಿ ದೃಢ ಮನಸ್ಸಿನ ಶ್ರೇಷ್ಠ ಬರಹಗಾರ್ತಿ. ಆಧುನಿಕ ಮಹಿಳಾ ಸಂವೇದನೆಗಳನ್ನು ತಮ್ಮ ಸೃಜಶೀಲ ಸಾಹಿತ್ಯಕ್ಕೆ ಬಳಸಿಕೊಂಡರು. ಅವರ ಬರವಣಿಗೆಗಳು ಸ್ತ್ರೀವಾದಿ ನೆಲೆಗಟ್ಟಿನ ಮೇಲೆ ರಚನೆಯಾಗಿವೆ ಎಂದು ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಲಾ ಪಾಟೀಲ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಡಾ. ಧರಣಿದೇವಿ ಮಾಲಗತ್ತಿ ಅವರಿಗೆ ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ-2024 ಪ್ರದಾನ ಮಾಡಿ ಮಾತನಾಡಿದರು.
ಡಾ. ಧರಣಿದೇವಿ ಅವರು 13 ವರ್ಷಗಳವರೆಗೆ ಒಬ್ಬ ಶ್ರೇಷ್ಠ ಪ್ರಾಧ್ಯಾಪಕರಾಗಿ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ್ದರಿಂದ ಅವರ ಸಮಗ್ರ ಸಾಹಿತ್ಯದ ಮೇಲೆ ಶಿಕ್ಷಣ ಪ್ರಭಾವವಿದೆ. ದಕ್ಷ ಪೊಲೀಸ್​ ಅಧಿಕಾರಿಯಾಗಿ ಒತ್ತಡಗಳ ಮಧ್ಯೆಯೂ ಸಾಹಿತಿಗಳಾಗಿ ರೂಪಗೊಳ್ಳಲು ಸಾಧ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯವರಾಗಿ ಉತ್ತರ ಕರ್ನಾಟಕದ ಸಾಹಿತ್ಯದ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಮೇಳೈಸಿಕೊಂಡಿದ್ದಾರೆ ಎಂದರು.
ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘ೦ಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಧರಣಿದೇವಿ ಅವರ ಸಾಹಿತ್ಯದಲ್ಲಿ ಸೂಕ್ಷ್ಮತೆ ಮತ್ತು ವೈಚಾರಿಕ ಚಿಂತನೆಗಳ ನಾನಾ ಮುಖಗಳನ್ನು ಕಾಣಬಹುದು. ಚರಿತ್ರೆಯುದ್ದಕ್ಕೂ ಸ್ತ್ರೀಯರನ್ನು ಕಡೆಗಣಿಸಿದ ಸಂದರ್ಭದಲ್ಲಿ ಎಲ್ಲ ಕಟ್ಟಳೆಗಳನ್ನು ಮೀರಿ ಸುಮಾರು 26ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯವನ್ನು ಶ್ರೀಮಂತಗೊಳಿಸಿದವರು ಎಂದರು.
ಡಾ. ಧರಣಿದೇವಿ ಮಾಲಗತ್ತಿ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಹಾರೊಗೊಪ್ಪ, ಚಂದ್ರಕಾಂತ ಬೆಲ್ಲದ, ಡಾ.ಜಿನದತ್ತ ಹಡಗಲಿ, ವೀರಣ್ಣ ಒಡ್ಡೀನ, ಡಾ. ಶ್ರೀಶೈಲ ಹುದ್ದಾರ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಅರವಿಂದ ಮಾಲಗತ್ತಿ, ಡಾ. ಶಶಿಧರ ನರೇಂದ್ರ, ಡಾ. ಡಿ.ಎಂ. ಹಿರೇಮಠ, ಕೆ.ಎಚ್​. ಚನ್ನೂರ, ಕುಮಾರ ಬೆಕ್ಕೇರಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net