

ನಂಜನಗೂಡು: ಮೈಸೂರು-ಗುಂಡ್ಲುಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಬರುವ ತಾಲೂಕಿನ ಮುದ್ದಹಳ್ಳಿ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ಕಾರ್ಯಕರ್ತರು ಸೋಮವಾರ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
ಮುದ್ದಹಳ್ಳಿ ಗೇಟ್ ಬಳಿ ಸಂಘಟಿತರಾದ ಪ್ರತಿಭಟನಾಕಾರರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಮುಖ್ಯ ರಸ್ತೆಯಲ್ಲೆ ಕೆಲ ಸಮಯ ಧರಣಿ ಕುಳಿತರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮುದ್ದಹಳ್ಳಿ ಗೇಟ್‌ನಲ್ಲಿ ಈ ಪ್ರದೇಶದ ಐದಾರು ಹಳ್ಳಿಗಳ ಜನರು ನಂಜನಗೂಡಿನತ್ತ ತೆರಳಲು ಬಸ್‌ಗಳಿಗಾಗಿ ಕಾಯುತ್ತಾರೆ. ಆದರೆ ಹೆದ್ದಾರಿಯಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಗೇಟಿನಲ್ಲಿ ನಿಲ್ಲುತ್ತಿಲ್ಲ. ಇದರಿಂದಾಗಿ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಿದೆ. ಹೀಗಾಗಿ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.
ಸ್ಥಳಕ್ಕಾಗಮಿಸಿದ ನಂಜನಗೂಡು ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕ ತ್ಯಾಗರಾಜು, ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ನಾಳೆಯಿಂದಲೇ ಮುದ್ದಹಳ್ಳಿ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಧರಣಿ ಕೈಬಿಟ್ಟರು.
ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಸಿಂಧುವಳ್ಳಿ ಬಸವಣ್ಣ, ಕೆರೆಹುಂಡಿ ರಾಜಣ್ಣ, ಬನ್ನೂರು ಸ್ವಾಮಿರಾಜ್, ಮೂಡಲಪುರ ನಾಗರಾಜ್, ಚಿಕ್ಕಸ್ವಾಮಿ, ರೇವಣ್ಣ, ಶಿವಣ್ಣ, ಸೋಮು, ಕುರಹಟ್ಟಿ ಗುರುಸ್ವಾಮಿ, ಚಂದ್ರವಾಡಿ ಆನಂದ್, ಅರಳಿಕಟ್ಟೆ ಕುಮಾರ್, ಕಳ್ಳಿಪುರ ಶ್ರೀಕಂಠ, ಮಾಲೂರು ಹರ್ಷಕುಮಾರ್, ಬಸವರಾಜಪ್ಪ, ಮಹೇಂದ್ರ, ಶಿವಣ್ಣ, ಮಾದೇವ ನಾಯಕ, ಭುಜಂಗಪ್ಪ, ನಾಗೇಂದ್ರಸ್ವಾಮಿ, ಅಂಡುವಿನಹಳ್ಳಿ ರವಿ ಸೇರಿದಂತೆ ಸಿಂಧುವಳ್ಳಿ, ಕುರಹಟ್ಟಿ, ಮುದ್ದಹಳ್ಳಿ ಗ್ರಾಮದ ಜನರು ಭಾಗವಹಿಸಿದ್ದರು.