ಪಿಎಸ್‌ಐ ಸಾವಿನ ಪ್ರಕರಣ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಧರಣಿ

IMG-20240805-WA0081 (1)
ನಂಜನಗೂಡಿನ ತಾಲೂಕು ಕಚೇರಿ ಮುಂಭಾಗ ಸೋಮವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
Published on

ನಂಜನಗೂಡು: ಯಾದಗಿರಿ ಪಿಎಸ್‌ಐ ಪರಶುರಾಮ ನಿಗೂಢ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.


ತಾಲೂಕು ಕಚೇರಿ ಮುಂಭಾಗ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ತಾಲೂಕು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಶಂಕರಪುರ ಮಂಜು ಮಾತನಾಡಿ, ಸಂತೆಮರಹಳ್ಳಿಯ ದಲಿತ ಯುವಕರ ಜೋಡಿ ಕೊಲೆ , ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಸಾವು, ಕನಕಪುರದ ದಲಿತ ಯುವಕನ ಕೈ ಕತ್ತರಿಸಿದ ಪ್ರಕರಣಗಳನ್ನು ಮರೆಯುವ ಮುನ್ನವೆ ಯಾದಗಿರಿ ಪಿಎಸ್‌ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಸೇರಿದಂತೆ ಇಂಥ ಸಾಕಷ್ಟು ದಲಿತ ಅಧಿಕಾರಿಗಳು, ಸಾಹಿತಿಗಳ ಕೊಲೆ ಪ್ರಕರಣ ನಡೆದರೂ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣವಾದ ಕಾಯ್ದೆಯನ್ನು ಜಾರಿ ಮಾಡಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾದಗಿರಿ ಪಿಎಸ್‌ಐ ಸಾವು ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಿಸಬೇಕು, ಇಲ್ಲದಿದ್ದಲ್ಲಿ ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದರು.


ದಸಂಸ ತಾಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಯಾದಗಿರಿ ಶಾಸಕರು ಹಾಗೂ ಪುತ್ರನನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು, ಶಾಸಕ ಸ್ಥಾನವನ್ನು ವಜಾಗೊಳಿಸಿ, ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸಿದರು.


ರಾಜ್ಯ ಅಂಬೇಡ್ಕರ್ ಸೇನೆ ಅಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಸುರೇಶ್, ನಟರಾಜ, ಮಹಾದೇವಸ್ವಾಮಿ, ಬೊಕ್ಕಹಳ್ಳಿ ಮಹಾದೇವಸ್ವಾಮಿ, ಶಿವರಾಜು, ಕಂದೇಗಾಲ ಶಿವಣ್ಣ, ಗಜೇಂದ್ರ, ಮಹೇಶ್, ಸಿದ್ದರಾಜು ಹುಸ್ಕೂರು, ಮಂಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net