

ಚಾಮರಾಜನಗರ: ಪ್ರಕೃತಿ ವಿಕೋಪದ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಹಾಗೂ ಬರ ಪರಿಹಾರ ಮತ್ತು ಗೋಶಾಲೆ ಆರಂಭಿಸಲು ಒತ್ತಾಯಿಸಿ ಕೊಳ್ಳೇಗಾಲ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಅಧ್ಯಕ್ಷ ಹಳ್ಳಿಕೆರೆ ಭಾಗ್ಯರಾಜ್ ನೇತೃತ್ವದಲ್ಲಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ದಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದ ನಂತರ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಈಗಾಗಲೇ ಬರದಿಂದ ತತ್ತರಿಸಿ ಹೋಗಿದೆ. ಈ ನಡುವೆ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡ ಸುಂಟರಗಾಳಿ ಬರದ ಮೇಲೆ ಬರೆ ಎಳೆದಿದೆ. ರೈತರ 750 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿದ್ದ ಬಾಳೆ, ತೆಂಗು, ಪರಂಗಿ, ಕಬ್ಬು, ಮುಸುಕಿನ ಜೋಳ ಇನ್ನಿತರ ಬೆಳೆಗಳು ನಾಶವಾಗಿದೆ.
ಕಂದಾಯ ಇಲಾಖೆ ಹಾನಿಗೊಳಗಾದ ಬೆಳೆಯನ್ನು ಸರ್ವೇ ಮಾಡುವ ಬದಲಿಗೆ ಚುನಾವಣೆ ಕೆಲಸದಲ್ಲಿ ಮಗ್ನವಾಗಿದೆ. ಈಗಾಗಲೇ ಈ ಬಗ್ಗೆ ರೈತರು ಹೋರಾಟ ಪ್ರಾರಂಭಿಸಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವೈಜ್ಞಾನಿಕವಾಗಿ ಸರ್ವೇ ಮಾಡಿ 1 ಎಕರೆಗೆ 1 ಲಕ್ಷ ರೂ.ಗೂ ಹೆಚ್ಚು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಮನೆ ಬಾಗಿಲಿಗೆ ಸರ್ಕಾರ ಎನ್ನುತ್ತಾರೆ. ಆದರೆ, ಜಿಲ್ಲಾಡಳಿತ ರೈತರ ಬೆಳೆ ಹಾನಿಗೆ ಪರಿಹಾರ ನೀಡದೆ ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಗ್ರಾಮೀಣ ಭಾಗದಲ್ಲಿ ಮೇವಿಗೆ ಕೊರತೆ ಆಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಗೋಶಾಲೆಯನ್ನು ತೆರೆಯಬೇಕು. ಕಳೆದ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಪ್ರತಿ ಟನ್ ಕಬ್ಬಿಗೆ 150 ರೂ.ನಂತೆ 25 ಕೋಟಿ ರೂ. ಹಾಗೂ 2023-24ನೇ ಸಾಲಿನ ಕಬ್ಬು ಹೆಚ್ಚುವರಿ ಲಾಭ ಅಂಶ ಕೊಡಿಸಬೇಕು. 1 ಲೀಟರ್ ಹಾಲಿಗೆ 10 ರೂ. ಹೆಚ್ಚಳ ಮಾಡಬೇಕು. ದಿನಕ್ಕೆ 10 ಗಂಟೆ 3 ಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರಾದ ಮಹದೇವಪ್ರಸಾದ್, ಬಸವರಾಜಪ್ಪ ಲಿಂಗಣಾಪುರ, ಗಣೇಶ್ ಉತ್ತಂಬಳ್ಳಿ, ರವಿ ತೇರಂಬಳ್ಳಿ, ರಂಗಸ್ವಾಮಿ ಕುಣಗಳ್ಳಿ, ಗುರುಸ್ವಾಮಿ ಧನಗೆರೆ, ಶಿವಸ್ವಾಮಿ ಮುಡಿಗುಂಡ, ನಾಗೇಶ್ ಕಜ್ಜಿಹುಂಡಿ, ಪ್ರಭುಸ್ವಾಮಿ, ಸಿದ್ದೇಶ್ ಮಧುವನಹಳ್ಳಿ, ಪ್ರಕಾಶ್, ಮದನ್, ಬಸವಣ್ಣ, ಪುಟ್ಟಸ್ವಾಮಿ, ರವಿ ಹಾಡ್ಯ, ಚಂದ್ರು ನರೀಪುರ ಇದ್ದರು.