ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಧರಣಿ

28
Published on

ಮೈಸೂರು: ಮಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಕನಕದಾಸರ ಭಾವಚಿತ್ರಕ್ಕೆ ಅಪಮಾನ ಮಾಡಿ, ಕುರುಬರ ಸಂಘದ ಹಾಸ್ಟೆಲ್ ಮೇಲೆ ಕಲ್ಲು ತೂರಿರುವ ಘಟನೆ ಖಂಡಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಧರಣಿ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಕೆರಗೋಡಿನಲ್ಲಿ ಉದ್ಭವಿಸಿರುವ ಕೇಸರಿ ಬಾವುಟ ವಿವಾದವನ್ನು ನೆಪವಾಗಿಟ್ಟುಕೊಂಡು ಶೋಷಿತ ಸಮುದಾಯಗಳನ್ನು ತುಳಿಯುವ ಉದ್ದೇಶದಿಂದ ಈ ಘಟನೆ ನಡೆದಿದೆ ಎಂದು ದೂರಿದರು.
ಸಂಘ ಪರಿವಾರದ ಹಿಡನ್ ಅಜೆಂಡಾ:
ಘಟನೆ ನೆಪದಲ್ಲಿ ಮಂಡ್ಯದ ಕುರುಬರ ಸಂಘದ ಕಟ್ಟಡ ಹಾಗೂ ಹಾಸ್ಟೆಲ್ ಮೇಲೆ ಕಲ್ಲು ತೂರಿ ಜಾತಿ ವೈಷಮ್ಯ ಹುಟ್ಟುಹಾಕಲು ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಮುಂದೊಡ್ಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎನ್.ಚಲುವರಾಯಸ್ವಾಮಿ ಅವರ ಭಾವಚಿತ್ರಕ್ಕೆ ಕಲ್ಲು ತೂರಿ ವಿಕೃತಿ ಮೆರೆಯಲಾಗಿದೆ ಎಂದು ಟೀಕಿಸಿದರು.
ಇಡೀ ಘಟನೆಗೆ ಮೂಲ ಕಾರಣಕರ್ತರು ಹೊರಗಿನಿಂದ ಬಂದು ಮಂಡ್ಯದಲ್ಲಿ ಗಲಭೆ ಎಬ್ಬಿಸುತ್ತಿರುವ ದುಷ್ಟರು ಹಾಗೂ ಅಧಿಕಾರಕ್ಕೆ ಕಾಯುತ್ತಿರುವ ಒಳಗಿನ ವ್ಯಕ್ತಿಗಳೇ ಆಗಿದ್ದಾರೆ. ಕಳೆದ ಮೂರು ದಶಕಗಳಿಂದ ಮಂಡ್ಯದಲ್ಲಿ ಎಲ್ಲಿಯೂ ನೆಲೆ ನಿಲ್ಲದ ಸಂಘ ಪರಿವಾರ ಕೆರಗೋಡನ್ನು ತನ್ನ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಆಯ್ಕೆ ಮಾಡಿಕೊಂಡಿದೆ ಎಂದು ದೂರಿದರು.
ಸಾಮರಸ್ಯದ ಸಕ್ಕರೆ ನಾಡಿನಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ಈ ಮೂಲಕ ರಾಜಕೀಯವಾಗಿ ನೆಲೆಯೂರಲು ಹವಣಿಸುತ್ತಿದೆ. ಆದರೆ ಮಂಡ್ಯ ನೆಲದ ಜನ ಅದಕ್ಕೆಲ್ಲ ಆಸ್ಪದ ನೀಡುವುದಿಲ್ಲ. ಸರ್ಕಾರ ಕೂಡಲೇ ಘಟನೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕೆ.ಎಸ್.ಶಿವರಾಮ್, ಮುಖಂಡರಾದ ಗಿರೀಶ್ ಉಪ್ಪಾರ್, ಡೇರಿ ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net