ಮೈಸೂರು: ಬಹು ಬೆಲೆಯ ಪೀಠೋಪಕರಣಗಳನ್ನು ಯಥಾ ಸ್ಥಿತಿಯಲ್ಲಿ ವಾಪಸ್ ತರದಿದ್ದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಿವಾಸದ ಮುಂದೆ ಧರಣಿ ನಡೆಸಲಾಗುವುದು ಎಂದು ಮಾಜಿ ಉಪಮೇಯರ್ ಆರ್.ಶೈಲೇಂದ್ರ ಹೇಳಿದರು.
ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾಗ ಪಾರಂಪರಿಕ ಶೈಲಿಯ ಪೀಠೋಪಕರಣ ತಮ್ಮೊಡನೆ ಕೊಂಡೊಯ್ದಿರುವುದು ಕಳವು ಮಾಡಿದುದಕ್ಕೆ ಸಮನಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಹುಬೆಲೆಯ ಪೀಠೋಪಕರಣಕ್ಕೆ ಕೇವಲ 77,296 ರೂ. ಮಾತ್ರ ಎಂದು ಬೆಲೆ ಕಟ್ಟಲಾಗಿದೆ. ಇಷ್ಟು ಕಡಿಮೆ ಬೆಲೆ ಕಟ್ಟಲು ಸಂಸ್ಥೆಗೆ ಅಧಿಕಾರ ನೀಡಿದವರು ಯಾರು. ಸಂಸ್ಥೆಯ ಪೀಠೋಪಕರಣಗಳು, ಮಂಚ, ಟೀಪಾಯಿ ಸಹಾ ಪಾರಂಪರಿಕ ಶೈಲಿಯ ಬೀಟೆ ಮರದಿಂದ ತಯಾರಿಸಲಾಗಿತ್ತು. ಇವುಗಳ ಮೌಲ್ಯ ಕೋಟ್ಯಂತರ ರೂ. ಅಗಲಿವೆ. ಆದರೆ ಈಗ ಕೇವಲ ಅಲ್ಪಮೊತ್ತದ ಹಣ ನೀಡುವಂತೆ ಸೂಚಿಸಲಾಗಿದೆ. ಇದು ಸರಿಯಲ್ಲ. ಹೀಗಾಗಿ ಅವುಗಳನ್ನು ಯಥಾವತ್ ವಾಪಸ್ ಪಡೆಯಬೇಕು. ಒಂದು ವೇಳೆ ಇದು ವಿಳಂಬವಾದಲ್ಲಿ ಸಂಬಂಧಿತ ಅಧಿಕಾರಿಗಳ ಕಚೇರಿ ಹಾಗೂ ರೋಹಿಣಿ ಸಿಂಧೂರಿ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದರು.
ಮುಖಂಡರಾದ ನಿಂಗರಾಜು, ಅಮಿತ್‌ರಾಜ್, ಜೀವನ್, ಮಂಜೇಶ್ ಇದ್ದರು.