ಅನಿರ್ಧಿಷ್ಟಾವಧಿ ಧರಣಿ ಮುಂದುವರಿಕೆ : ನಿವೇಶನ ರಹಿತರ ಹೋರಾಟ

New Project (27)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಕುಪ್ಪೆಪದವು ಗ್ರಾಮ ಪಂಚಾಯಿತಿ ಕಚೇರಿ ಎದುರು ಹಮ್ಮಿಕೊಂಡಿರುವ ನಿವೇಶನರಹಿತರ ಹೋರಾಟ ಸಮಿತಿ ಅನಿರ್ಧಿಷ್ಟಾವಧಿ ಧರಣಿ ಸೋಮವಾರ ಮುಂದುವರಿದಿದೆ.

ಮೇ 26ರಂದು ಆರಂಭವಾಗಿದ್ದ ಅನಿರ್ಧಿಷ್ಟಾವಧಿ ಧರಣಿ ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಹೇರಲಾದ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

ಕೇವಲ 17 ನಿವೇಶನರಹಿತರಿಗೆ ನಿವೇಶನ ಹಂಚಿಕೆ ಭರವಸೆ ಬೇಡವೇ ಬೇಡ. ಎಲ್ಲ 97 ಫಲಾನುಭವಿಗಳಿಗೆ ಸರ್ಕಾರಿ ನಿವೇಶನ ಹಂಚಿಕೆಯಾಗಬೇಕು ಎಂದು ಧರಣಿ ಕುಳಿತಿರುವ ಹಕ್ಕುಪತ್ರ ಪಡೆದ ಫಲಾನುಭವಿಗಳು ಆಗ್ರಹಿಸಿದ್ದಾರೆ.

ಈ ಮಧ್ಯೆ ಕುಪ್ಪೆಪದವು ಪಿಡಿಒ ಸವಿತಾ ಮುದೋಳಿಕರ್, ಪಂಚಾಯಿತಿ ಸದಸ್ಯ ರಫೀಕ್ ಧರಣಿ ನಿರತರ ಬಳಿ ಬಂದು ಕಲ್ಲಾಡಿಯ ಸರ್ಕಾರಿ ಜಾಗದ ಸರ್ವೇ ನಂಬ್ರ ಸರಿಪಡಿಸಲು ಸರ್ವೇ ಇಲಾಖೆಗೆ ಕೇಳಿಕೊಂಡಿದ್ದೇವೆ. ಅಂಬೆಲೊಟ್ಟುವಿನಲ್ಲಿ 5.08 ಎಕರೆ ಹೊಸದಾಗಿ ಗುರುತಿಸಿರುವ ಬಗ್ಗೆ ಮಾಹಿತಿ ನೀಡಿದರು.

ಅಲ್ಲಿ, ಇಲ್ಲಿ ಸರ್ಕಾರಿ ಜಾಗ ಸವೆರ್ ಮಾಡಿದ್ದೇವೆ ಎಂಬ ಮನವೊಲಿಸುವ ಕೆಲಸ ಬಿಟ್ಟುಬಿಡಿ. ಹಲವು ಬಾರಿ ಇಂತಹ ಭರವಸೆ ಕೇಳಿದ್ದೇವೆ. ಮೊದಲು ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನಿವೇಶನ ತೋರಿಸಿ, ಇನ್ನೆಷ್ಟು ಸಮಯ ಬೇಕಾಗುತ್ತದೆ ಎಂಬುದರ ಬಗ್ಗೆ ಲಿಖಿತ ಭರವಸೆ ನೀಡಿ. ಇಲ್ಲವಾದಲ್ಲಿ ಧರಣಿ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿವೇಶನರಹಿತರೊಂದಿಗೆ ಹೋರಾಟ ಸಮಿತಿಯ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮನೋಹರ ಶೆಟ್ಟಿ ನಡಿಕಂಬ್ಳ, ಸದಾಶಿವದಾಸ್, ವಸಂತಿ ಕುಪ್ಪೆಪದವು, ಸದಾಶಿವ ಕಟ್ಟೆಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net