

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳ ಕೈಯಲ್ಲೊಂದು ಪಿಚಕಾರಿ...ಯುವಕರ ಬಾಯಲ್ಲಿ ತುತ್ತೂರಿ... ಒಬ್ಬರಿಗೊಬ್ಬರು ಗೊತ್ತು ಸಿಗಲಾರದಷ್ಟು ಮುಖಕ್ಕೆಲ್ಲ ಮೆತ್ತಿಕೊಂಡ ಬಣ್ಣ. ಈ ಮಧ್ಯೆ ಹಲಗೆ-ತಮಟೆ ಸದ್ದಿನ ರಂಗು. ಒಟ್ಟಾರೆ ವಿದ್ಯಾನಗರಿ ಧಾರವಾಡ ಶನಿವಾರ ಕಲರ್ ಫುಲ್ ಆಗಿತ್ತು.
ಧಾರಾನಗರಿಯಲ್ಲಿ ದಿನವಿಡೀ ಓಕುಳಿ ವಿಶಿಷ್ಟ ರೀತಿಯಲ್ಲಿ ಆಚರಣೆಗೊಂಡಿತು. ಮಕ್ಕಳು, ಯುವಕರು, ಮಹಿಳೆಯರು ಹಬ್ಬದ ಸಡಗರದಲ್ಲಿ ಮಿಂದೆದ್ದರು. ಲಬೋ... ಲಬೋ...ಎಂದು ಕೂಗುತ್ತ, ಕರ್ಕಶ ಧ್ವನಿ ಮಾಡುತ್ತ ನಗರದ ರಸ್ತೆಯಲ್ಲಿ ಸಾಗುತ್ತಿದ್ದ ಯುವಕರ ತಂಡ ಕೈಯಲ್ಲಿ ಬಣ್ಣ ಹಿಡಿದು ಪರಸ್ಪರ ಎರಚಾಟದಲ್ಲಿ ತೊಡಗಿದ್ದರು.
ಮಧ್ಯಾಹ್ನ ಕಳೆದರೂ ಬಣ್ಣದಾಟದ ರಂಗು ಕಡಿಮೆ ಆಗಿರಲಿಲ್ಲ. ಬೆಳಗ್ಗೆ ಕಾಮದಹನ ಮಾಡಿದ ಜನರು ಬೊಬ್ಬೆ ಹಾಕುತ್ತ ತಮ್ಮ ಮನೆ, ಬಡಾವಣೆಗಳಿಂದಲೇ ಬಣ್ಣದೋಕುಳಿ ಆರಂಭಿಸಿದರು. ಕಲರ್ ಕಲರ್ ಬಣ್ಣ ಹಿಡಿದುಕೊಂಡ ಮಕ್ಕಳಿಂದ ಶುರುವಾದ ರಂಗಿನಾಟ ಹಿರಿಯರಾದಿಯಾಗಿ ಎಲ್ಲರನ್ನೂ ಸಂಭ್ರಮದಲ್ಲಿ ತೇಲಿಸಿತು. ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ಎದುರಿಗೆ ಬಂದ ಜನರಿಗೆ ಬಣ್ಣ ಎರಚಿ ಸಂಭ್ರಮಪಡುತ್ತಿದ್ದರೆ, ಯುವತಿಯರು ತಾವೇನೂ ಕಡಿಮೆ ಇಲ್ಲ ಎಂಬಂತೆ ಬಣ್ಣಾಟದಲ್ಲಿ ತೊಡಗಿದ್ದರು. ಅಲ್ಲದೆ ಯುವಕ-ಯುವತಿಯುರು ಬೈಕ್ಗಳಲ್ಲಿ ತಂಡೋಪ ತಂಡವಾಗಿ ನಗರ ಸುತ್ತಿ ತಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಪರಿಚಯಸ್ಥರಿಗೆ ಬಣ್ಣ ಹಾಕಿ ಸಂಭ್ರಮಿಸಿದರು.
ನಗರದ ವಿವಿಧ ಕಡೆಗಳಲ್ಲಿ ಕಡೆಗಳಲ್ಲಿ ರೇನ್ ಡಾನ್ಸ್, ಡಿಜೆ ಅಬ್ಬರ, ಗಡಿಗೆ ಒಡೆಯುವ ಸ್ಪರ್ಧೆ ಹೋಳಿ ಸಂಭ್ರಮ ರಂಗೇರುವಂತೆ ಮಾಡಿದ್ದವು. ಸುಭಾಷ ರಸ್ತೆಯಲ್ಲಿ ರೇನ್ ಡಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ನಗರದೆಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಂಜೆಯವರೆಗೂ ಅಹಿತಕರ ಘಟನೆ ನಡೆಯದೆ ಬಣ್ಣದಾಟ ಶಾಂತಿಯುತವಾಗಿ ಅಂತ್ಯವಾಯಿತು.