ಮಕ್ಕಳ ಶೈಕ್ಷಣಿಕ ಪ್ರಗತಿಗೆ ‘ಧರ್ಮಸ್ಥಳ ಯೋಜನೆ’ ಬದ್ಧ

09-kkr-1(8-24
ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಡಿ. ಜಯರಾಮ ನೆಲ್ಲಿತ್ತಾಯ, ಕೇಶವ ದೇವಾಂಗ, ರೇವತಿ, ಎಂ. ವೀರೇಶಪ್ಪ, ರೇಣುಕಾ, ಮೊಟ್ಟೆಮಂಜು ಉಪಸ್ಥಿತರಿದ್ದರು.
Published on

ಕಿಕ್ಕೇರಿ : ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಅವಶ್ಯವಿದ್ದು, ಜ್ಞಾನದ ಹಸಿವಿನ ಪ್ರತಿಭಾನ್ವಿತ ಮಕ್ಕಳಿಗೆ ಪೂರಕ ಸಹಾಯ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಸಿದ್ಧ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದರು.
ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸುಜ್ಞಾನನಿಧಿ ಶಿಷ್ಯ ವೇತನ ಮುಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಹಿಳಾ ಸಬಲೀಕರಣ, ಸ್ವಾವಲಂಬನೆ ಬದುಕಿನ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹಲವಾರು ಯೋಜನೆ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಯಲ್ಲಿ ಲೆಕ್ಕ ಮಾಡುವ ಬದಲು ಕನಿಷ್ಠ ಡಿಗ್ರಿ ಓದಿ ನೀವೇ ನಿಮ್ಮ ವ್ಯವಹಾರದ ಲೆಕ್ಕ ಹಾಕುವಂತಾಗಬೇಕು. ಸ್ವಾವಲಂಬನೆ ಬದುಕಿಗೆ ಗುರಿ ಇಟ್ಟು ಓದಿದರೆ ಯಶಸ್ಸು ಸಿಗಲಿದೆ ಎಂದರು.
ಇನ್‌ಸ್ಪೆಕ್ಟರ್ ರೇವತಿ ಮಾತನಾಡಿ, ಸಂಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿಸ್ವಾರ್ಥವಾಗಿ ಸೇವೆ ಕಲ್ಪಿಸಿದೆ. ಅಕ್ಷರ, ಪರಿಸರ, ಉದ್ಯೋಗ, ಆರೋಗ್ಯ, ದೇಗುಲ ಸಂರಕ್ಷಣೆ, ನಿರುದ್ಯೋಗಿಗಳಿಗೆ ತರಬೇತಿ, ಆರ್ಥಿಕ ವ್ಯವಹಾರಕ್ಕೆ ಬ್ಯಾಂಕಿಂಗ್‌ನಂತಹ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಷ್ಯವೇತನ ಭವಿಷ್ಯದ ಮಕ್ಕಳಿಗೆ ಬಹಳ ಅನುಕೂಲವಾಗಲಿದೆ ಎಂದು ನುಡಿದರು.

ಪದವಿ, ಇಂಜಿನಿಯರಿಂಗ್ ಮತ್ತಿತರ ವ್ಯಾಸಂಗ ಮಾಡುತ್ತಿರುವ ಅರ್ಹ 150 ವಿದ್ಯಾರ್ಥಿಗಳಿಗೆ ಶಿಷ್ಯವೇತನಾ ಅರ್ಹತಾ ಪತ್ರ ವಿತರಿಸಲಾಯಿತು. ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ, ಮೇಲ್ವಿಚಾರಕರಾದ ರೇಣುಕಾ, ಯಶೋದಾ, ಮುಖಂಡ ಮೊಟ್ಟೆಮಂಜು, ದೇವರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net