ಧರ್ಮಸ್ಥಳ ಯೋಜನೆ ಇತರ ರಾಜ್ಯಗಳಿಗೂ ಪ್ರೇರಣೆ

13
Published on

ಮೈಸೂರು: ಡಾ.ಡಿ. ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ವಿ. ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರ ಮೂರು ರಾಜ್ಯಗಳಲ್ಲೂ ಸ್ವಸಹಾಯ ಸಂಘಗಳ ರಚನೆಗೆ ಪ್ರೇರಣೆಯಾಗಿದೆ ಎಂದು ಜಿಲ್ಲಾ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುವೆಂಪುನಗರ, ಚಾಮುಂಡಿಬೆಟ್ಟ ವಲಯ ವತಿಯಿಂದ ಹೊಸಹುಂಡಿಯ ಭಾಗ್ಯಮ್ಮ ನರಸೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಪ್ರಗತಿಬಂಧು ಸ್ವಸಹಾಯ ಸಂಘಗಳ ವಲಯ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಯೋಜನೆಯ ಯಶೋಗಾಥೆ ತಿಳಿದು ತಮಿಳುನಾಡು, ಹರ್ಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲೂ ಈ ರೀತಿಯ ಯೋಜನೆ ನಡೆಸಿ ಎಂದು ಕೋರಿದ್ದರು. ಆದರೆ ನಾವು ಕರ್ನಾಟಕಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿದ್ದೇವೆ. ನೀವು ಬೇಕಾದರೆ ಈ ಮಾದರಿಯನ್ನು ಅಲ್ಲಿ ಜಾರಿ ಮಾಡಿ ಎಂದು ಡಾ.ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು. ಅದರಂತೆ ಆ ಮೂರು ರಾಜ್ಯಗಳಲ್ಲೂ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದೆ. ಚಳವಳಿ ಮಾದರಿಯಲ್ಲಿ ವ್ಯಾಪಿಸಿದೆ. ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಇದ್ದ ಮಹಿಳೆಯರು ಹೊರಬಂದು ಪರಿವರ್ತನೆಯಾಗಬೇಕು. ಆಕೆಯ ಜವಾಬ್ದಾರಿ ಜಾಸ್ತಿಯಾಗಬೇಕು. ಬದುಕು ಕಟ್ಟಿಕೊಳ್ಳಬೇಕು. ಆರ್ಥಿಕ ಸಾಕ್ಷರತೆ ಬರಬೇಕು ಎಂಬುದು ಯೋಜನೆಯ ಉದ್ದೇಶ. ನಾವು ಕೇವಲ ಆಶ್ವಾಸನೆ, ಭರವಸೆ ನೀಡುವುದಿಲ್ಲ. ಬದಲಿಗೆ ಮಹಿಳೆಯನ್ನು ಶಕ್ತಿಯಾಗಿ ಪರಿವರ್ತಿಸುತ್ತಿದ್ದೇವೆ. ಶ್ರಮವಹಿಸಿ ದುಡಿಯುವ ಮಹಿಳೆ ಉಳಿತಾಯದ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ ಎಂದರು.
ತಾಲೂಕು ಜನಜಾಗೃತಿ ಸಮಿತಿ ಸದಸ್ಯ ಆರ್. ರವಿ ಮಾತನಾಡಿ, ಮಹಿಳೆಯರು ಮುಖ್ಯವಾಹಿನಿಗೆ ಬಂದು ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂಬ ಉಧ್ದೇಶದಿಂದ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗಿದೆ. ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಮುಂದೆ ಬರುತ್ತಿದ್ದು, ಉತ್ತಮವಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಈಗ ರಾಜ್ಯ ಸರ್ಕಾರ ಕೂಡ ಶಕ್ತಿ ಯೋಜನೆ, ಗೃಹಜ್ಯೋತಿ ಮೂಲಕ ಮಹಿಳೆಯರಿಗೆ ಒಂದಷ್ಟು ಅನುಕೂಲ ಮಾಡಿಕೊಟ್ಟಿದೆ. ಎಲ್ಲದರ ಸದುಪಯೋಗ ಪಡೆದು, ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು ಎಂದು ಅವರು ಹೇಳಿದರು.

ಭಾನವಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಕೆ.ನರಸೇಗೌಡ, ಗುಡುಮಾದನಹಳ್ಳಿ ಗ್ರಾಪಂ ಮಾಜಿ ಸದಸ್ಯ ಲೋಕೇಶ್, ಹೊಸಹುಂಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜುಗೌಡ, ಸೋಮೇಶ್ವರಪುರ ಗ್ರಾಪಂ ಅಧ್ಯಕ್ಷೆ ರಾಜಮ್ಮ ಮಹದೇವ್, ಕುವೆಂಪುನಗರ ಕ್ಷೇತ್ರ ಯೋಜನಾಧಿಕಾರಿ ಎನ್. ಶಕುಂತಲಾ, ಕಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net