

ಬೈಲಹೊಂಗಲ: ಪೂಜೆ, ಪ್ರಾರ್ಥನೆಗಳು ಮನಸ್ಸು ಶುದ್ಧೀಕರಣಗೊಳಿಸಲಿದ್ದು, ನಿತ್ಯ ದೇವರ ಧ್ಯಾನದೊಂದಿಗೆ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ತಾಲೂಕಿನ ಬಾವಿಹಾಳ ಗ್ರಾಮದ ಶ್ರೀ ಚನ್ನವೃಷಭೇಂದ್ರ ದೇವರಕೊಂಡ ಲೀಲಾಮಠದಲ್ಲಿ ಹಿರೇಬಾಗೇವಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಹಾಗೂ ಸಾಮೂಹಿಕ ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜಾ ಸಮಿತಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜಾ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜನರ ನೆಮ್ಮದಿಗಾಗಿ ಧಾರ್ಮಿಕ ಕಾರ್ಯ ನೆರವೇರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬಾವಿಹಾಳದ ಸದ್ಗುರು ಚನ್ನವೃಷಭೇಂದ್ರ ಮಠದ ಮಾಣಿಕ್ಯ ವೃಷಭೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ನಿರ್ಗತಿಕರಿಗೆ ಮಾಸಾಶನ ಪ್ರಮಾಣ ಪತ್ರ, ವಿದ್ಯಾರ್ಥಿ ವೇತನ ಪ್ರಮಾಣ ಪತ್ರ, ವಿಮಾ ಯೋಜನೆಯ ಸೌಲಭ್ಯದ ಪ್ರಮಾಣ ಪ್ರತಗಳನ್ನು ವಿತರಿಸಲಾಯಿತು. ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಂಠೆಪ್ಪ ಇಂಚಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಗ್ರಾಪಂ ಸದಸ್ಯರಾದ ಈರಯ್ಯ ಉದೇಶಿಮಠ, ಕಸ್ತೂರಿ ಗುರುಪುತ್ರನವರ, ಬಿಬಿಜಾನ್ ಕರ್ಣಾಚಿ, ಅನಸೂಯಾ ತಳವಾರ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಕೃಷಿ ಮೇಲ್ವಿಚಾರಕ ರಿಯಾಜ್ ದರಗಾದ, ಕೆ.ಕೆ.ಹಾರುಗೊಪ್ಪ, ಒಕ್ಕೂಟದ ಅಧ್ಯಕ್ಷೆ ಕಲಾವತಿ ಗೌಡರ, ಹಿರೇಬಾಗೇವಾಡಿ ಶಾಖೆ ಯೋಜನಾಧಿಕಾರಿ ಪಿ.ಯೋಗೀಶ, ಮೇಲ್ವಚಾರಕ ಪ್ರಶಾಂತ ಎನ್., ಸುನೀಲ ಮೊಖಾಶಿ ಇತರರು ಇದ್ದರು.