ನೊಂದವರ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೆರವು

RemasterDirector_1a5c03258
ಪಿರಿಯಾಪಟ್ಟಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯವೇತನ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಮಹದೇವ್ ಉದ್ಘಾಟಿಸಿದರು. ಲೀಲಾವತಿ, ಆನಂದ ಸುವರ್ಣ, ಸೋಮಶೇಖರ್, ಬಿ.ಜೆ.ದೇವರಾಜ್ ಹಾಜರಿದ್ದರು.
Published on

ಪಿರಿಯಾಪಟ್ಟಣ: ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನೊಂದವರ ಬದುಕಿಗೆ ನೆರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಟುವಟಿಕೆ ಶ್ಲಾಘನೀಯವಾದದ್ದು ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.

ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಶಾಖೆಗಳ ವತಿಯಿಂದ ಶನಿವಾರ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯವೇತನ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು, ವಸತಿರಹಿತರಿಗೆ ವಸತಿ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಭವನಗಳ ನಿರ್ಮಾಣ, ವೃದ್ಧರಿಗೆ ಮಾಶಾಸನ ನೀಡುವುದು, ಅಂಗವಿಕಲರಿಗೆ ಪರಿಕರಗಳ ವಿತರಣೆ, ಡೇರಿಗಳ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಲಾಗುತ್ತಿದೆ. ಈ ಸವಲತ್ತುಗಳನ್ನು ಪಡೆದವರು ಪ್ರತಿ ಕ್ಷಣವೂ ಕೃತಜ್ಞತಾ ಪೂರಕವಾಗಿ ಇರಬೇಕು ಮತ್ತು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಉನ್ನತಿಯನ್ನು ಹೊಂದಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಈ ಸಂಸ್ಥೆಯು ಸಮಾಜದ ಪ್ರತಿಯೊಬ್ಬರ ಬಗ್ಗೆಯೂ ಕಾಳಜಿ ವಹಿಸಿ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ನೊಂದವರ ಮತ್ತು ಬಡವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ವತಿಯಿಂದ ಈವರೆಗೆ 18 ಸಾವಿರ ಅನಾಥರಿಗೆ ಪ್ರತಿ ತಿಂಗಳು 1 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. 200ಕ್ಕೂ ಹೆಚ್ಚು ಶಾಲೆಗಳ ಜೀರ್ಣೋದ್ಧಾರ ಮಾಡಿ ವಿವಿಧ ಪರಿಕರಗಳನ್ನು ನೀಡಲಾಗಿದೆ. 3 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲಾಗುತ್ತಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 4 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದು ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆ ಮಾಡಲಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲೆಯ ನಿರ್ದೇಶಕಿ ಲೀಲಾವತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮತ್ತು ಅಂಗವಿಕಲರಿಗೆ ವೀಲ್ ಚೇರ್, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಹಾಗೂ ಪ್ರಶಂಸನಾ ಪತ್ರಗಳನ್ನು ನೀಡಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಮಹೇಶ್, ಶಿಕ್ಷಣ ಸಂಯೋಜಕ ಸೋಮಶೇಖರ್, ಜನಜಾಗೃತಿ ವೇದಿಕೆಯ ಎ.ಟಿ.ರಂಗಸ್ವಾಮಿ, ಬಿ.ಜೆ.ದೇವರಾಜು, ಷಣ್ಮುಖರಾವ್, ಡಿ.ಅಶೋಕ್, ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಎಂ.ಕೆ.ಕಾಂತರಾಜು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರವಿ, ಸಂತೋಷ್‌ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net