

ಪಾಂಡವಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಡವರ ಆರ್ಥಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್ ಹೇಳಿದರು.
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಶಿವ ಬಿಲ್ವಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಂಡವಪುರ ತಾಲೂಕಿನಲ್ಲಿ 5100 ಸಂಘಗಳಿದ್ದು, 30 ಸಾವಿರ ಸದಸ್ಯರಿದ್ದಾರೆ. ಈ ಸದಸ್ಯರಿಂದ 45 ಕೋಟಿ ರೂ. ಉಳಿತಾಯವಾಗಿದೆ. ಅಣ್ಣ-ತಮ್ಮಂದಿರೇ ಒಬ್ಬರಿಗೊಬ್ಬರು ಜಾಮೀನು ನೀಡಲು ಹಿಂದೇಟು ಹಾಕುವಾಗ ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗ್ಯಾರಂಟಿ ನೀಡಿ ವಿವಿಧ ಬ್ಯಾಂಕ್‌ಗಳಿಂದ ತಾಲೂಕಿಗೆ ಸಾವಿರದ ನೂರು ಕೋಟಿ ರೂ. ಸಾಲ ಪಡೆದು ವಿತರಿಸಿದ್ದಾರೆ. ಬಡವರು ತಾವು ಪಡೆದು ಕೊಳ್ಳುವ ಸಾಲವನ್ನು ಸದ್ಬಳಕೆ ಮಾಡಿಕೊಂಡು ಜೀವನದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹೆಸರಿನಲ್ಲಿ ಸಾಮಾಜಿಕ ಸೇವೆ ಮಾಡುತ್ತಿದ್ದು, ಗ್ರಾಮಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ. ಬ್ಯಾಂಕ್ ಮತ್ತು ಜನರ ನಡುವೆ ನಿಂತು ಸಲ್ಲಿಸುತ್ತಿರುವ ಸೇವೆಗೆ ಬ್ಯಾಂಕ್‌ಗಳು ಸೇವಾ ಶುಲ್ಕ ಪಾವತಿಸುತ್ತಿದ್ದು, ಖರ್ಚು, ವೆಚ್ಚಗಳು ಕಳೆದು ಉಳಿಯುವ ಹಣವನ್ನು ಸೇವಾ ಕಾರ್ಯಕ್ಕೆ ಬಳಸಲಾಗುತ್ತಿದೆ. ದೇವಸ್ಥಾನ ಜೀರ್ಣೋದ್ಧಾರ, ಕೆರೆ-ಕಟ್ಟೆಗಳ ಹೂಳೆತ್ತುವಿಕೆ, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್, ವೃದ್ಧರಿಗೆ ಮಾಸಾಶನ, ಅಂಗವಿಕಲರಿಗೆ ಸಲಕರಣೆ ವಿತರಿಸುವುದು ಹಾಗೂ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ನೀಡುವುದು ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಮೇಲುಕೋಟೆ ಯೋಜನಾಧಿಕಾರಿ ಸರೋಜಾ, ಜನ ಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಅಶ್ವತ್ಥ್‌ಕುಮಾರೇಗೌಡ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷ ಕೆಂಪೇಗೌಡ, ಡೇರಿ ಅಧ್ಯಕ್ಷ ಲೋಕೇಶ್, ಪಿಎಸಿಎಸ್ ಅಧ್ಯಕ್ಷ ಜ್ಞಾನೇಶ್, ಜ್ಯೋತಿ, ಗ್ರಾಮಸ್ಥರಾದ ರವಿ, ಬೆಟ್ಟೇಗೌಡ, ಕಿಟ್ಟೇಗೌಡ, ಸಂಜಯ್, ಶಶಿಕುಮಾರ್ ಇತರರು ಇದ್ದರು.