

ಸಿರಿಗೆರೆ: ನಾಗರಿಕರ ಅತಿ ಆಸೆಯಿಂದಾಗಿ ಅರಣ್ಯ ವಿನಾಶದ ಅಂಚಿಗೆ ತಲುಪಿದೆ. ಪರಿಸರ ಉಳಿಸಿ ಬೆಳೆಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಯೋಜನಾಧಿಕಾರಿ ಎ.ಜೆ.ಪ್ರವೀಣ್ ಅಭಿಪ್ರಾಯಪಟ್ಟರು.
ಗ್ರಾಮದ ಅಳಗವಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ನಾಶದಿಂದಾಗಿ ಸರಿಯಾದ ಸಮಯದಲ್ಲಿ ಮಳೆ ಬಾರದೆ ರೈತ ಕಷ್ಟ ಅನುಭವಿಸುವಂತಾಗಿದೆ.
ಬಿತ್ತಿದ ಬೆಳೆ ಕೈಗೆಟುಕದೆ ಅನ್ನದಾತ ನಷ್ಟ ಅನುಭವಿಸುತ್ತಿದ್ದಾನೆ ಎಂದರು.
ಜೀವಿತ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಮರಗಳನ್ನು ಬೆಳೆಸಿ, ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು.
ನೀರನ್ನು ಮಿತವ್ಯಯವಾಗಿ ಬಳಸಿ, ಪೋಲು ಮಾಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ 5000 ಸಸಿಗಳನ್ನು ನೆಡಲು ಸಂಕಲ್ಪ ಮಾಡಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಸಸಿಗಳನ್ನು ಉಚಿತವಾಗಿ ನೀಡಲಾಯಿತು.
ದಾವಣಗೆರೆ ವಿಭಾಗದ ಅರಣ್ಯ ಇಲಾಖೆ ಅಧಿಕಾರಿ ಎ.ಕೆ.ಉಮೇಶ್, ಗ್ರಾಪಂ ಅಧ್ಯಕ್ಷ ಷಣ್ಮುಖಪ್ಪ ಇತರರಿದ್ದರು.