ಬಡವರ ಪಾಲಿನ ನಂದಾದೀಪ ಧರ್ಮಸ್ಥಳ ಸಂಸ್ಥೆ

Dha Gra
Published on

ಹಿರೇಕೆರೂರ: ಧರ್ಮಸ್ಥಳ ಸಂಸ್ಥೆ ಬಡವರ ಪಾಲಿಗೆ ನಂದಾದೀಪವಾಗಿದ್ದು, ಹಲವಾರು ಸಮಾಜಮುಖಿ ಹಾಗೂ ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ.ಎಂ. ಹೇಳಿದರು.

ತಾಲೂಕಿನ ಕೋಡ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸ್ವ ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

2024-25ನೇ ಸಾಲಿನಲ್ಲಿ ಕೋಡ ವಲಯದಲ್ಲಿರುವ ಒಟ್ಟು 241 ಸಂಘಗಳಿಗೆ 50 ಲಕ್ಷ ರೂಪಾಯಿಗಳ ಮೊತ್ತದ ಲಾಭಾಂಶ ಬಂದಿದೆ. ಸಂಘದ ಸದಸ್ಯರು ಉಳಿತಾಯ ಮತ್ತು ಸಾಲದ ವ್ಯವಹಾರವನ್ನು ಬ್ಯಾಂಕ್ ಮೂಲಕ ಮಾಡುತ್ತಿದ್ದು, ಈ ವ್ಯವಹಾರಕ್ಕೆ ಬ್ಯಾಂಕಿನಿಂದ ಬಂದ ಲಾಭಾಂಶವನ್ನು ಸಂಘದ ಸದಸ್ಯರಿಗೆ ನೀಡುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಕೋಡ ಗ್ರಾಮದ 5 ಸಂಘಗಳಿಗೆ ಸಂಕೇತಿಕವಾಗಿ ಲಾಭಾಂಶವನ್ನು ವಿತರಣೆ ಮಾಡಿದರು. ಗ್ರಾಪಂ ಉಪಾಧ್ಯಕ್ಷ ಮಾಲತೇಶ ಮ್ಯಾಗೇರಿ, ಒಕ್ಕೂಟದ ಅಧ್ಯಕ್ಷ ಮಂಜಣ್ಣ ಸಣ್ಣನಿಂಗಣ್ಣವರ, ಉಪಾಧ್ಯಕ್ಷ ನಾಗಣ್ಣ ಕಮ್ಮಾರ ಹಾಗೂ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯ ಸಿಬ್ಬಂದಿಯವರು ಇದ್ದರು. ವಲಯದ ಮೇಲ್ವಿಚಾರಕ ಮಂಜುನಾಥ ಎನ್., ಸೇವಾ ಪ್ರತಿನಿಧಿ ಚೈತ್ರಾ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net