ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಕೊಡುಗೆ

25_HSN_02
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನಗರದ ಚನ್ನವೀರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿ ಹಾಗೂ ಮಹಿಳಾ ಸಮಾವೇಶವನ್ನು ನೇತ್ರಾವತಿ ಗಿರೀಶ್ ಉದ್ಘಾಟಿಸಿದರು. ಮಮತಾ ಹರೀಶ್‌ರಾವ್, ಸಿ.ಕೆ.ಹರಿಪ್ರಸಾದ್, ಸುಮಾ, ಭಾರತಿ ಇತರರು ಇದ್ದರು.
Published on

ಹಾಸನ: ಮಹಿಳೆ ಕೇವಲ ಹೆಣ್ಣಲ್ಲ, ಸಮಾಜದ ಕಣ್ಣು. ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನಗರದ ಚನ್ನವೀರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರಗೋಷ್ಠಿ ಹಾಗೂ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೇಮಾವತಿ ಹೆಗ್ಗಡೆ ಅವರು ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯೋಜನೆ ನಿರ್ದೇಶಕಿ ಮಮತಾ ಹರೀಶ್‌ರಾವ್ ಮಾತನಾಡಿ, ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರನ್ನು ಮುನ್ನಲೆಗೆ ತರಬೇಕು ಎಂಬುದೇ ಜ್ಞಾನವಿಕಾಸ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಕೆನರಾ ಸ್ವ-ಉದ್ಯೋಗ ಸಂಸ್ಥೆ ಉಪನ್ಯಾಸಕ ಸಿ.ಕೆ.ಹರಿಪ್ರಸಾದ್ ಮಾತನಾಡಿ, ಮಹಿಳೆಯರು ಯಶಸ್ವಿ ಸ್ವ-ಉದ್ಯೋಗದ ಕೌಶಲಗಳ ಮೂಲಕ ಗುರುತಿಸಿಕೊಳ್ಳಬೇಕು. ಬೇರೆಡೆ ದಿನವಿಡೀ ಕಡಿಮೆ ಸಂಬಳಕ್ಕೆ ದುಡಿಯುವುದರ ಬದಲು ಸ್ವ-ಉದ್ಯೋಗವನ್ನು ಮಾಡಿ ಇತರರಿಗೆ ಕೆಲಸ ನೀಡುವುದರ ಜತೆಗೆ ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.

ವಕೀಲೆ ಸುಮಾ ಮಾತನಾಡಿ, ಮಹಿಳೆಯರಿಗೆ ಕಾನೂನಿನ ಬಗ್ಗೆ ಅರಿವು ಅಗತ್ಯ. ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕಲು ಸಹಕಾರಿಯಾಗಲಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಬಗ್ಗೆ ಕೀಳರಿಮೆ ಬಿಟ್ಟು ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಮಾಜದ ಮುಂದೆ ಸಾಬೀತು ಪಡಿಸಬೇಕಾದರೆ ಕಾನೂನಿನ ಅರಿವು ಬಹಳ ಮುಖ್ಯ ಎಂದರು.

ಕಾರ್ಯಕ್ರಮದ ಸಂಚಾಲಕಿ ಭಾರತಿ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮದ ಆರಂಭದಿಂದಲೂ ಆರೋಗ್ಯ, ಉದ್ಯೋಗ, ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಮಹಿಳೆಯರನ್ನು ತಲುಪುವ ಕೆಲಸ ಮಾಡಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿ ಮನೆಗೆ ತಲುಪುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶಾರಿಕಾ, ಜನಜಾಗೃತಿ ವೇದಿಕೆಯ ಸದಸ್ಯ ಶ್ರೇಯನ್ಸ್ ಜೈನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾಂಚನಮಾಲಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಬಬಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net