

ನಾಲತವಾಡ: ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ರುಡ್‌ಸೆಟ್ ಸಂಸ್ಥೆಯಡಿ ಈವರೆಗೆ ಅಂದಾಜು 32 ಸಾವಿರ ಅಭ್ಯರ್ಥಿಗಳು ವಿವಿಧ ಕೌಶಲಗಳ ತರಬೇತಿ ಪಡೆದಿದ್ದು ಅಂದಾಜು 28 ಸಾವಿರ ಅಭ್ಯರ್ಥಿಗಳು ಸ್ವಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಾಲೂಕು ಯೋಜನಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ ವೀರೇಶ್ವರ ಮಹಾಮನೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಉದ್ಯೋಗ ಪ್ರೇರಣಾ ಶಿಬಿರ ಹಾಗೂ ಮಂಗಳಗೌರಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ತಮ್ಮ ಸಹಕಾರದಿಂದ ಹಲವಾರು ಸ್ವಸಹಾಯ ಸಂಘಗಳು ಕೋಟಿಗಟ್ಟಲೇ ವ್ಯವಹಾರ ಮಾಡಿವೆ. ಸಭಾಭವನ, ಅತಿಥಿ ಶಿಕ್ಷಕರ ನೇಮಕ ವೇತನ, ಕೆರೆಗಳ ಅಭಿವೃದ್ಧಿ, ವೃದ್ಯಾಪವೇತನ, ದೇವಸ್ಥಾನಗಳ ಜೀರ್ಣೋದ್ದಾರ, ಮನೆಗಳ ನಿರ್ಮಾಣಕ್ಕೆ ಅನುದಾನ ಹತ್ತು ಹಲವಾರು ಯೋಜನೆಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುನ್ನಡೆ ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಮದ್ಯಪಾನ ವಿರೋಧಿ ಆಂದೋಲನದ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪಟ್ಟಣದ ಪ್ರಮುಖ ಕೆರೆ ಜೀರ್ಣೋದ್ಧಾರ ಮಾಡುವ ನಿಟ್ಟಿನಲ್ಲಿ ಈಗಾಗಲೇ ಶಾಸಕ ನಾಡಗೌಡ ಅವರನ್ನು ಭೇಟಿ ಮಾಡಲಾಗಿದೆ. ಶಾಸಕರೂ ಸಹ ಸಹಕರಿಸಿದ್ದು ಶೀಘ್ರ ಸ್ಥಳೀಯ ಕೆರೆಯ ಜೀಣೋದ್ಧಾರಕ್ಕೆ ಮುಹೂರ್ತ ನಿಗದಿಗೊಳಿಸುತ್ತೇವೆ ಎಂದರು.
ಮುತ್ತು ಅಂಗಡಿ ಮಾತನಾಡಿದರು. ಜಿಲ್ಲಾ ಜನ ಜಾಗತಿ ವೇದಿಕೆಗೆ ನೂತನವಾಗಿ ನೇಮಕವಾದ ಗಿರೀಶಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಮರಪ್ಪ ಗಂಗನಗೌಡರ, ಗುರು ವಸದ, ಹಣಮಂತ ವಡ್ಡರ, ಕಮಲಾ ಭಜಂತ್ರಿ, ಲೀನಾ ರ್ನಾಂಡಿಸ್, ರೇಣುಕಾ ಹಾದಿಮನಿ, ಪ್ರತಿಭಾ ಸ್ಥಾವರಮಠ, ಜೋತಿ ಸಜ್ಜನ ಹಾಗೂ ಜುಲೇಖಾಬೇಗಂ ಹಳ್ಳೂರ ಇದ್ದರು.