ಡಾ. ವೀರೇಂದ್ರ ಹೆಗ್ಗಡೆ ಶೋಷಿತರ ಪಾಲಿನ ದನಿ

10 nrp 4
ಶೆಟ್ಟಿಕೊಪ್ಪದಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನಾ ಸಮಾವೇಶವನ್ನು ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಸುಬ್ರಹ್ಮಣ್ಯ ಉದ್ಘಾಟಿಸಿದರು. ಶೈಲಾ ಮಹೇಶ್, ಬಿಂದೂ ಸತೀಶ್, ಎನ್.ಎಂ.ಕಾಂತರಾಜ್, ಕೆ.ಎನ್.ನಾಗರಾಜು ಇತರರಿದ್ದರು.
Published on

ಎನ್.ಆರ್.ಪುರ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬಡವರ, ಹಿಂದುಳಿದವರ, ಶೋಷಿತರ, ಮಹಿಳೆಯರ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಯೋಜನೆಯ ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಸುಬ್ರಹ್ಮಣ್ಯ ಹೇಳಿದರು.

ತಾಲೂಕಿನ ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ಬಂದು 15ರಿಂದ 18 ವರ್ಷಗಳಾಗಿವೆ. ಹಿಂದೆ ಜನರ ಜೀವನ ಕಷ್ಟವಾಗಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ಜಿಗುಪ್ಸೆಗೊಂಡಿದ್ದರು. ಬಹಳಷ್ಟು ಬಡತನ ಕಾಡುತ್ತಿತ್ತು. 5ರಿಂದ 10 ಸಾವಿರ ರೂ.ಗೆ ಕೆಲ ಕುಟುಂಬಗಳು ಜೀತದಾಳುಗಳಂತೆ ದುಡಿಯಬೇಕಿತ್ತು. ಅಂತಹ ಸಂದರ್ಭದಲ್ಲಿ ಪೂಜ್ಯ ಖಾವಂದರರು ಗ್ರಾಮೀಣ ಜನರ, ನೊಂದವರ, ಬಡವರ, ಆತ್ಮಸ್ಥೈರ್ಯ ತುಂಬಲು ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳನ್ನು ರಚಿಸಿ ಆರ್ಥಿಕ ಸಹಾಯ ನೀಡಿದರು. ಹಂತ ಹಂತವಾಗಿ ಸ್ವಾವಲಂಬಿಗಳಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರ ನೀಡಿದ್ದರ ಫಲವಾಗಿ ಇಂದು ರಾಜ್ಯಾದ್ಯಂತ ಲಕ್ಷಾಂತರ ಸಂಘಗಳು ರಚನೆಗಳಾಗಿವೆ ಎಂದರು.
ಜನರಿಗಾಗಿ ವಾತ್ಸಲ್ಯ ಯೋಜನೆ, ಗ್ರಾಮ ಕಲ್ಯಾಣ, ಸಮುದಾಯ ಅಭಿವೃದ್ಧಿ, ಜನ ಮಂಗಲ, ಸ್ವಚ್ಛ ಗ್ರಾಮ, ಶುದ್ಧ ಗಂಗಾ ಘಟಕ, ನಮ್ಮೂರು ನಮ್ಮ ಕೆರೆ, ಸ್ವ-ಉದ್ಯೋಗ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸುತ್ತಿದ್ದಾರೆ. ಮಾಹಿತಿ ಕೊರತೆಯಿಂದಾಗಿ ಯೋಜನೆ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಕೇಳಿ ಬರುತ್ತಿದೆ. ಕಳೆದ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಗ್ಯ ಸುರಕ್ಷಾ ಯೋಜನೆಯಡಿ 1062 ಜನ ಮರಣ ಹೊಂದಿದ್ದು, ಮೃತರ ಕುಟುಂಬದ ಲಕ್ಷಾಂತರ ರೂ. ಸಾಲಮನ್ನಾ ಮಾಡಲಾಗಿದೆ. ಜತೆಗೆ ಕಟ್ಟಿದ ಹಣವನ್ನು ವಾಪಾಸ್ ನೀಡಲಾಗಿದೆ ಎಂದು ಹೇಳಿದರು.
ಉಪನ್ಯಾಸಕಿ ಮಧುರಾ ಮಂಜುನಾಥ್ ಮಾತನಾಡಿ, ಪ್ರತಿಯೊಂದು ಕುಟುಂಬಕ್ಕೆ ಒಳ್ಳೆಯ ಸಂಸ್ಕಾರ ಬೇಕು. ಶಿಕ್ಷಣದ ಜತೆಗೆ ಸಂಸ್ಕಾರವೂ ಇರಬೇಕು. ತಾಳ್ಮೆ ಮತ್ತು ಸಂಸ್ಕಾರದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಯೋಜನೆ ಮೂಲಕ ಸಾಲ ನೀಡುವುದು, ನಿಮ್ಮ ಬದುಕಿನ ಮೂಲ ಅಗತ್ಯತೆಗಳನ್ನು ಪಡೆದುಕೊಳ್ಳುವುದಕ್ಕೇ ಹೊರತು ಐಷಾರಾಮಿ ಜೀವನ ನಡೆಸಲಿಕ್ಕಲ್ಲ ಎಂದು ಕಿವಿಮಾತು ಹೇಳಿದರು.
ಶೆಟ್ಟಿಕೊಪ್ಪ ಶಾಲೆಯ ಮುಖ್ಯಶಿಕ್ಷಕಿ ಪುಟ್ಟಮ್ಮ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ವ-ಸಹಾಯ ಸಂಘಗಳಿಗೆ ಹೆಚ್ಚು ದಾಖಲೆಗಳನ್ನು ಕೇಳದೆಯೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಹತ್ತು ಹಲವು ಜನಪರವಾದ ಕಾರ್ಯಕ್ರಮಗಳನ್ನು ಯೋಜನೆ ಹಾಕಿಕೊಂಡು ಯಶಸ್ವಿಯಾಗುತ್ತಿದೆ ಎಂದರು.
ಯೋಜನೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿ, ಮುಂಬಡ್ತಿ ಪಡೆದು ಕಾರಾವಾರ ತಾಲೂಕಿನ ಮೇಲ್ವಿಚಾರಕರಾಗಿ ನಿಯೋಜನೆಗೊಂಡ ಅನುಪ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟಗಳಲ್ಲಿ ವಿಜೇತರಾದ ಸಂಘಗಳ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಸಾಧನೆಗೈದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳನ್ನು ಅಭಿನಂದಿಸಲಾಯಿತು.
ಕಡಹಿನಬೈಲು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಎ.ಇ.ಎಲ್ದೋ ಅಧ್ಯಕ್ಷತೆ ವಹಿಸಿದ್ದರು. ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್ , ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಎನ್.ಎಂ.ಕಾಂತರಾಜ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಕೆ.ಎನ್.ನಾಗರಾಜು, ಶೆಟ್ಟಿಕೊಪ್ಪ ವಲಯದ ಮೇಲ್ವಿಚಾರಕ ಸತೀಶ್, ಹೊನ್ನಮ್ಮ, ಕಳ್ಳಿಕೊಪ್ಪ ಸೇವಾ ಪ್ರತಿನಿಧಿ ರಮಾ, ನಿರೀಕ್ಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net