ಮಕ್ಕಳಿಗೆ ಕಷ್ಟದ ಪರಿಸ್ಥಿತಿ ಅರ್ಥಮಾಡಿಸಿ: ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಕಿವಿಮಾತು

14_02_Mdy_01(Mahila Vicharagosti)
Published on

ಮಂಡ್ಯ: ಇಂದಿನ ಮಕ್ಕಳಿಗೆ ನಮ್ಮ ಕುಟುಂಬದ ಕಷ್ಟಗಳ ಅರಿವಿಲ್ಲದಂತಾಗಿದೆ. ಆದ್ದರಿಂದ ಆತ್ಮಹತ್ಯೆ, ಸಂಘರ್ಷ ಮತ್ತು ವಿಚ್ಛೇದನ ಹೆಚ್ಚಳವಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಇನ್ಸಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಸಲಹೆ ನೀಡಿದರು.

ನಗರದ ಕಾಳಿಕಾಂಬ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಹಾಗೂ 1051ನೇ ಜ್ಞಾನ ವಿಕಾಸ ಕೇಂದ್ರದ ದಾಖಲಾತಿ ಹಸ್ತಾಂತರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ‘ಮಹಿಳಾ ಸಬಲೀಕರಣ ನಿಲುವುಗಳ ಬಗ್ಗೆ ಮಾರ್ಗದರ್ಶನ’ ಕುರಿತು ಉಪನ್ಯಾಸ ನೀಡಿದರು. ಮಕ್ಕಳಿಗೆ ಅಗತ್ಯವೆಂದು ಮೊಬೈಲ್, ಬೈಕ್ ಸೇರಿದಂತೆ ಇತರೆ ಐಷಾರಾಮಿ ವಸ್ತುಗಳನ್ನು ಕೊಡಿಸುವ ಮುನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಮಿತವ್ಯಯಿಗಳಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಭವಿಷ್ಯದ ಬಗ್ಗೆ ಚಿಂತಿಸುವ ಉದಾತ್ತ ಗುರಿಯನ್ನು ಪ್ರತಿಯೊಬ್ಬರೂ ಹೊಂದಬೇಕು. ಶ್ರೀ ಕ್ಷೇತ್ರದ ವಾತ್ಸಲ್ಯ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮಗಳು ಬಡವರು ಹಾಗೂ ಶೋಷಿತರ ಅಭಿವೃದ್ಧಿಗೆ ನೆರವಾಗಲಿದೆ. ಮಹಿಳೆಯರ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಜ್ಞಾನ ವಿಕಾಸ ಕಾರ್ಯಕ್ರಮ ಆರಂಭಿಸಿದ್ದು, ನಾಲ್ಕು ಗೋಡೆಗಳ ನಡುವೆ ಕಳೆದು ಹೋಗುವ ಮಹಿಳೆಯರು ಕಲೆ, ಸಂಗೀತ, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದತ್ತ ಆಸಕ್ತಿ ಹೊಂದಬೇಕು. ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲ್ಲು ಪ್ರತಿಯೊಬ್ಬರಿಗೂ ಶಿಕ್ಷಣ ಹಾಗೂ ಮನೋಸ್ಥೈರ್ಯ, ಸಂಘಟನೆ ಅಗತ್ಯವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದುಪಯೋಗಪಡಿಸಿಕೊಂಡು ಉತ್ತಮ ಬಾಳ್ವೆ ನಡೆಸಬೇಕೆಂದು ಕರೆ ನೀಡಿದರು.

ಭಾರತದಲ್ಲಿರುವ ಆಹಾರ ವೈವಿಧ್ಯತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಪೂರ್ವಿಕರ ಆಹಾರ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ನಮ್ಮ ಆಹಾರ ಪದ್ಧತಿ ರಾಗಿ, ಜೋಳ, ನವಣೆ ಸೇರಿದಂತೆ ಸಿರಿಧಾನ್ಯ ಹಾಗೂ ಕಾಳುಗಳು ಪೌಷ್ಠಿಕಾಂಶದ ಆಗರವಾಗಿವೆ. ಆದರೆ ಇಂದಿನ ತಲೆಮಾರು ಫಾಸ್ಟ್ ಫುಡ್‌ಗೆ ಮಾರುಹೋಗಿ ನಮ್ಮ ಆಹಾರ ಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗಿರುವುದು ಅಪಾಯಕಾರಿ. ಇದನ್ನು ತಡೆಯುವ ಹೊಣೆಗಾರಿಕೆಯಲ್ಲಿ ಎಲ್ಲರ ಪಾತ್ರವೂ ಮುಖ್ಯ. ಸಮಾಜದಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇರುತ್ತದೆ. ಆದ್ದರಿಂದ ನಮ್ಮ ಅಭಿರುಚಿಯನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯಬೇಕು. ಅಂತೆಯೇ ಕೌಟುಂಬಿಕ ದೌರ್ಜನ್ಯಗಳನ್ನು ಬಿಂಬಿಸುವ ಧಾರಾವಾಹಿಗಳಿಗೆ ಮಹಿಳೆಯರು ಜೋತು ಬೀಳಬಾರದು. ಬದಲಿಗೆ ಕ್ರೀಡೆ, ಆರೋಗ್ಯ, ಕೃಷಿ ಮುಂತಾದ ಸಾಮಾಜಿಕ ಕಾರ್ಯಗಳನ್ನು ಬಿಂಬಿಸುವ ವರದಿಗಳನ್ನು ಆಸ್ವಾಧಿಸಬೇಕೆಂದು ಕಿವಿಮಾತು ಹೇಳಿದರು.

ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಕಾಲೇಜು ಉಪಪ್ರಾಂಶುಪಾಲೆ ಭಾಗ್ಯ, ಶ್ರೀ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕಿ ಎಂ.ಚೇತನಾ, ಉಪ ವಿಭಾಗೀಯ ನಿರ್ದೇಶಕ ಎಚ್.ಎಲ್.ಮುರುಳೀಧರ್, ಕ್ಷೇತ್ರ ಯೋಜನಾಧಿಕಾರಿ ನಾರಾಯಣ ಪಾಟಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net