

ಶಿಡ್ಲಘಟ್ಟ: ಧಾರ್ಮಿಕತೆ ಇರುವಲ್ಲಿ ಶಿಸ್ತು ಮತ್ತು ನ್ಯಾಯಬದ್ಧತೆ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.ತಾಲೂಕಿನ ಬೆಳ್ಳೂಟಿ ಗೇಟ್‌ನ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿ ಹಮ್ಮಿಕೊಂಡಿದ್ದ ಸ್ವ-ಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ವ-ಸಹಾಯ ಎನ್ನುವುದು ನಮಗೆ ನಾವೇ ಸಹಾಯ ಮಾಡಿಕೊಳ್ಳುವುದು ಎಂದರ್ಥ. ಇದಕ್ಕೆ ಯಾರೊಬ್ಬರೂ ದೇಹಿ ಅನ್ನಬಾರದು. ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು.
ಉಳಿತಾಯ ಹಣವು ಕೇವಲ 10 ಇಲ್ಲವೇ 20 ರೂ. ಗಳೆಂದು ಕಡೆಗಣಿಸಬಾರದು. ನಿರಂತರವಾಗಿ ಸ್ವ-ಸಹಾಯ ಸಂಘದ ಸದಸ್ಯರು ಕೂಡಿಟ್ಟ ಹಣವೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 43 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದರು.ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಅಬಲೆಯರನ್ನು ಸಬಲೆಯರನ್ನಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಶ್ರಮಿಸುತ್ತಿದೆ. ಲಕ್ಷಾಂತರ ಮಹಿಳೆಯರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 1985ರಿಂದ ಇಲ್ಲಿಯವರೆಗೆ 85 ಸಾವಿರ ಕೋಟಿ ರೂ. ವಹಿವಾಟು ನಡೆದಿದ್ದು, ಈಗ 16.5 ಸಾವಿರ ಕೋಟಿ ಸಾಲ ನೀಡಲಾಗಿದೆ. ಇಷ್ಟು ವಹಿವಾಟು ನಡೆದರೂ 2.19 ಕೋಟಿ ರೂ. ಮಾತ್ರ ಸುಸ್ತಿಯಾಗಿರುವುದು ಮಹಿಳೆಯರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಹೆಣ್ಣು ಕಲಿತರೆ ಶಾಲೆ ತೆರೆದಂತೆ, ಶಿಕ್ಷಣ, ಆರೋಗ್ಯ ಸೇರಿ ಪ್ರತಿ ಕ್ಷೇತ್ರದಲ್ಲಿಯೂ ಹೆಗ್ಗಡೆಯವರು ವಿಶೇಷ ಯೋಜನೆ ರೂಪಿಸಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಸದಸ್ಯರು ಟ್ರಸ್ಟ್‌ನಲ್ಲಿದ್ದು ಶಿಡ್ಲಘಟ್ಟ ತಾಲೂಕಿನಲ್ಲಿ ಸುಮಾರು 3.300 ಸಂಘಗಳಿವೆ. 50 ಸಾವಿರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮಹಿಳೆಯರು ಗ್ರಾಮಗಳಲ್ಲಿ ಒಗ್ಗೂಡಿ ಅನಧಿಕೃತ ಮದ್ಯ ಮಾರಾಟಕ್ಕೆ ತಡೆಯೊಡ್ಡಬೇಕು ಎಂದರು.
ಶಾಸಕ ವಿ.ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ನಾಗೇಶ್, ಶ್ರದ್ಧಾ ಅಮಿತ್, ತಹಸೀಲ್ದಾರ್ ಬಿ.ಎಸ್.ರಾಜೀವ್, ಮಾಜಿ ಶಾಸಕರಾದ ಪಿಳ್ಳ ಮುನಿಸ್ವಾಮಪ್ಪ, ರಾಜಣ್ಣ, ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಜನಜಾಗೃತಿ ವೇದಿಕೆ ಅಧ್ಯಕ್ಷ ಪಿಳ್ಳಮುನಿಶಾಮಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಮತ್ತಿತರರು ಇದ್ದರು.
ರಾಜ್ಯದ 6 ಕೋಟಿ ಜನರ ಸೇವೆ ಮಾಡುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ದೇಶದ ಜನರ ಸೇವೆ ಮಾಡುವ ಅವಕಾಶ ಒದಗಿಸಿಕೊಟ್ಟಿದ್ದಾರೆ.ಎಂ.ಟಿ.ಬಿ.ನಾಗರಾಜ್, ಜಿಲ್ಲಾ ಉಸ್ತುವಾರಿ ಸಚಿವ
ನಾನಾ ಸವಲತ್ತುಗಳ ವಿತರಣೆ: ಮಾಸಾಶನ, ಅಂಗವಿಕಲರಿಗೆ ವೀಲ್ ಚೇರ್, ಸಿಡ್ಬಿ ಪ್ರಗತಿ ನಿಧಿ, ಸುಜ್ಞಾನನಿಧಿ ಶಿಷ್ಯವೇತನ, ವಾತ್ಸಲ್ಯ ಮನೆ, ಇ-ಶ್ರಮ್ ಕಾರ್ಡ್, ದೇವಸ್ಥಾನಕ್ಕೆ ಸಹಾಯಧನ, ಆರೋಗ್ಯರಕ್ಷಾ ವಿಮೆಯ ಹಣ ಸೇರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾನಾ ಸವಲತ್ತುಗಳನ್ನು ವಿತರಿಸಲಾಯಿತು.
ಧರ್ಮಸ್ಥಳಕ್ಕೆ ಈ ಭಾಗದ ತರಕಾರಿ: ಧರ್ಮಸ್ಥಳದಲ್ಲಿ ನಡೆಸುವ ಅನ್ನದಾನಕ್ಕೆ ಇದುವರೆವಿಗೂ ತರಕಾರಿಗಳನ್ನು ಕೊಂಡಿದ್ದೇ ಇಲ್ಲ. ಬಹುತೇಕ ಅತ್ಯುತ್ತಮ ತರಕಾರಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ರೈತರು ಕಳುಹಿಸುತ್ತಿದ್ದಾರೆ. ಇದು ನಿಜವಾಗಲೂ ಒಳ್ಳೆಯ ಕೆಲಸ. ಇನ್ನು ಅನ್ನದಾತರ ಕಲ್ಯಾಣ ದೃಷ್ಟಿಯಿಂದ ಆಧುನಿಕ ಕೃಷಿಗೆ ಒತ್ತು ನೀಡಿ ‘‘ಯಂತ್ರಧಾರಾ’ ಯೋಜನೆಯನ್ನು ರೂಪಿಸಲಾಗಿದೆ ಎಂದು ಧರ್ಮಾಧಿಕಾರಿಗಳು ತಿಳಿಸಿದರು.
ಮೆರವಣಿಗೆ ಮತ್ತು ಕೆರೆ ಹಸ್ತಾಂತರ: ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸಗಳನ್ನು ಹೊತ್ತು ಸ್ವಾಗತ ಕೋರಿದರು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಸಾಥ್ ನೀಡಿದವು. ರಸ್ತೆಯ ಅಕ್ಕಪಕ್ಕದ ಅಂಗಡಿ, ಮನೆಗಳಲ್ಲಿನ ಜನರು ಹೊರಗಡೆ ರಥಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಿಡ್ಲಘಟ್ಟ ತಾಲೂಕಿನ ಕೊತ್ತನೂರಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿರುವ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು. ಬೆಳ್ಳೂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗಿಡ ನೆಟ್ಟು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.