ಧಾರಕಾರ ಮಳೆಗೆ ಮೈದುಂಬಿ ಹರಿದ ಕಟ್ಟೆಹೊಳೆ ಹಳ್ಳ

TKE 1 (KATTE)
Published on

ತರೀಕೆರೆ: ಕಳೆದೆರಡು ದಿನಗಳಿಂದ ತಾಲೂಕಿನ ವಿವಿಧೆಡೆ ಸುರಿಯುತ್ತಿರುವ ಗುಡುಗು ಸಹಿತ ಮಳೆ ಅಬ್ಬರಕ್ಕೆ ಬಹುತೇಕ ಕಡೆ ಹಳ್ಳ, ಕೊಳ್ಳ, ಕೆರೆ-ಕಟ್ಟೆಗಳಿಗೆ ಜೀವಕಳೆ ಬಂದಿದೆ.

ತಾಲೂಕಿನ ಲಕ್ಕವಳ್ಳಿ, ಹಲಸೂರು, ರಂಗೇನಹಳ್ಳಿ, ನೇರಲಕೆರೆ, ಅಮೃತಾಪುರ, ಇಟ್ಟಿಗೆ, ಯರೇಹಳ್ಳಿ, ಎ ಮತ್ತು ಬಿ.ರಾಮನಹಳ್ಳಿ,ಲಕ್ಕೇನಹಳ್ಳಿ, ಪಿರಮೇನಹಳ್ಳಿ,ಹಿರೇಕಾತೂರು, ಬೇಲೇನಹಳ್ಳಿ, ಜೋಡಿಕೋಡಿಹಳ್ಳಿ,ಬೆಟ್ಟದಹಳ್ಳಿ, ಕೆ.ಹೊಸೂರು,ಲಿಂಗದಹಳ್ಳಿ,ಎಂ.ಸಿ.ಹಳ್ಳಿ,ಗಂಟೆಕಣಿವೆ. ಸೀತಾಪುರ ಕಾವಲು ಇನ್ನಿತರ ಗ್ರಾಮಗಳಲ್ಲಿ ವ್ಯಾಪಕ ಮಳೆಯಾಗಿದೆ.

ವರುಣಾರ್ಭಟಕ್ಕೆ ಕಟ್ಟೆಹೊಳೆ ಹಳ್ಳ ಮೈದುಂಬಿ ಹರಿದಿದೆ. ಎ.ರಾಮನಹಳ್ಳಿಯ ದೊಡ್ಡಕೆರೆ, ಇಟ್ಟಿಗೆ ಗ್ರಾಮದ ತಾವರೆವೊಡ್ಡು, ದೊಡ್ಡ ನಿಂಗೇನಹಳ್ಳಿ ಕೆರೆ, ಕೆಂಚಾಪುರದ ಕೆರೆ ಸೇರಿ ವಿವಿಧ ಗ್ರಾಮಗಳ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಮಳೆ ಅಬ್ಬರಕ್ಕೆ ಕೆಂಚೇನಹಳ್ಳಿ ಗ್ರಾಮದ ಬಸವರಾಜಪ್ಪ, ಮಠದಹಳ್ಳಿಯ ರಾಮಣ್ಣ, ಉಪ್ಪಾರ ಬೀರನಹಳ್ಳಿಯ ವೆಂಕಟೇಶ, ಬೆಟ್ಟ ತಾವರೆಕೆರೆ ಗ್ರಾಮದ ಭೈರಪ್ಪ ಎಂಬುವವರ ಮನೆ ಗೋಡೆ ಕುಸಿದಿದೆ. ಮಾಳಿಕೊಪ್ಪದ ಚಂದ್ರು ಎಂಬುವವರ ಕೊಟ್ಟಿಗೆ ಕುಸಿದು ಎರಡು ಜಾನುವಾರುಗಳು ಮೃತಪಟ್ಟಿವೆ.

ಅಡಕೆ ತೋಟ, ಕೃಷಿ ಭೂಮಿಯಲ್ಲಿ ನೀರು ನಿಂತಿದೆ. ಲಕ್ಕವಳ್ಳಿ, ಹುಣಸಘಟ್ಟ ಮತ್ತು ಇಟ್ಟಿಗೆ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಯತ್ತ ಮುಖ ಮಾಡಿವೆ. ಕಾಕತಾಳೀಯ ಎಂಬಂತೆ ಕಳೆದ ವರ್ಷವೂ ಇದೇ ದಿನ ತಾಲೂಕಿನ ಕಟ್ಟೆಹೊಳೆ ಹಳ್ಳ ಅಂದು ಸುರಿದ ಮಳೆಗೆ ತುಂಬಿ ಹರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net