

ಕಾರ್ಗಲ್: ಶರಾವತಿ ಕಣಿವೆಯ ಕಾರ್ಗಲ್‌ನಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸಲ್ಮಾನ ಬಾಂಧವರು ಗುರುವಾರ ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಪೈಗಂಬರರ ಜನ್ಮ ಸಮಯವಾದ ಬೆಳಗಿನ ಜಾವ ನಾಲ್ಕು ಗಂಟೆಗೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. 8.30ಕ್ಕೆ ಮಸೀದಿಯ ಹಿರಿಯ ಧರ್ಮಗುರುಗಳಾದ ಎ.ಪಿ.ಮೊಹಮ್ಮದ್ ಪೈಜಿ ಧ್ವಜಾರೋಹಣ ನೆರವೇರಿಸಿದರು. ಮಸೀದಿಯಿಂದ ಹೊರಟ ಮೆರವಣಿಗೆ ಮುಖ್ಯಪೇಟೆಯ ಮಾರ್ಗವಾಗಿ ತಳಕಳಲೆ ವೃತ್ತದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯ ಉದ್ದಕ್ಕೂ ಮದರಸಾ ವಿದ್ಯಾರ್ಥಿಗಳು ನಡೆಸಿದ ದಫ್ ನೃತ್ಯ ಎಲ್ಲರ ಗಮನ ಸೆಳೆಯಿತು.
ಹಬ್ಬಗಳ ಆಚರಣೆಯು ಅತ್ಯಂತ ಶಾಂತಿಯಿಂದ ನಡೆಯಬೇಕು. ಸಾಮರಸ್ಯದ ಬದುಕನ್ನು ಕಾಣಬೇಕು. ಆ ನಿಟ್ಟಿನಲ್ಲಿ ಹಿರಿಯರು ನಮಗೆ ಆದರ್ಶಗಳನ್ನು ನೀಡಿ ಹೋಗಿದ್ದಾರೆ. ಶರಾವತಿ ಕಣಿವೆಯಲ್ಲಿ ಇಂತಹ ಸಾಮರಸ್ಯಕ್ಕೆ ಎಂದಿಗೂ ಕೊರತೆಯಿಲ್ಲ ಎಂದು ಜುಮ್ಮಾ ಮಸೀದಿಯ ಜಮಾತ್ ಕಮಿಟಿ ಅಧ್ಯಕ್ಷ ಎಚ್.ಎಸ್.ಸಾದಿಕ್ ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಸುಲೇಮಾನ್, ಉಪಾಧ್ಯಕ್ಷ ಮಲ್ಲಿಕ್, ಕಾರ್ಯದರ್ಶಿ ಶಕೀರ್, ಖಜಾಂಚಿ ಶಿಯಾಬ್, ಪ್ರಮುಖರಾದ ಎ.ಪಿ.ಮೊಹಮ್ಮದ್, ವಿ.ಕೆ.ನಸ್ಸಿರ್, ಬಷೀರ್, ಅಶ್ರಪ್ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.