

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಕೋಟೆಮನೆಯಲ್ಲಿ ಇತ್ತೀಚೆಗೆ ಧನುರ್ಮಡ್ಡಿ ಪದ್ಧತಿಯನ್ನು ಆಚರಿಸಲಾಯಿತು.
ಹಿಂದೆ ಧನುರ್ಮಾಸದಲ್ಲಿ ಪ್ರತಿ ದಿನವೂ ಒಂದೊಂದು ಮನೆಯವರು ಇದನ್ನು ಆಚರಿಸುತ್ತಿದ್ದರು. ಹಿಂದಿನಿಂದ ರೂಢಿಯಲ್ಲಿದ್ದ ಈ ಆಚರಣೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಅದು ಮರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಶ್ರೀ ಸಿದ್ಧಿ ವಿನಾಯಕ ರೈತ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಈ ವಿಶಿಷ್ಟ ಕಾರ್ಯಕ್ರಮವನ್ನು ಕೆಲ ವರ್ಷಗಳಿಂದ ಆಯೋಜಿಸುತ್ತ ಬಂದಿದ್ದಾರೆ.
ಅಕ್ಕಿರೊಟ್ಟಿ ಅನ್ನ, ಸಾರು, ಸಾಂಬಾರ್, ಪಾಯಸ, ಪಲಾವ್ ಮಾಡಲಾಗಿತ್ತು. ಅಕ್ಕಿರೊಟ್ಟಿಯೊಂದಿಗೆ ತಯಾರಿಸಿದ ವಿಶೇಷ ಅಡುಗೆಯನ್ನೆಲ್ಲ ದೇವರಿಗೆ ಸಮರ್ಪಿಸಿದ ನಂತರ ಮಧ್ಯಾಹ್ನ ಊರಿನವರೆಲ್ಲ ಒಟ್ಟಾಗಿ ಕುಳಿತು ಭೋಜನ ಸವಿದರು.
ಈ ಪದ್ಧತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕೆಲವು ವರ್ಷಗಳಿಂದ ಸಂಘದ ಮಹಿಳೆಯರೆಲ್ಲ ಸೇರಿ ಧನುರ್ಮಾಸದ ಧನುರ್ಮಡ್ಡಿ ಆಚರಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷೆ ಗೀತಾ ಭಟ್ಟ ಹೇಳಿದರು. ಅವರೊಂದಿಗೆ ಕಾವೇರಿ ರಾಮಚಂದ್ರ ಭಟ್ಟ, ರಂಜನಾ ಗಣಪತಿ ಭಟ್ಟ, ಮಾದೇವಿ ವಿಶ್ವನಾಥ ಭಟ್ಟ, ಸುಜಾತಾ ವೆಂಕಟ್ರಮಣ ಭಟ್ಟ, ಜಾಹ್ನವಿ ಗಜಾನನ ಭಟ್ಟ, ಕಮಲಾ ಜಿ. ಭಟ್ಟ, ಸಾಧನಾ ಬಾಲಚಂದ್ರ ಭಟ್ಟ, ಇತರರು ಭಾಗವಹಿಸಿದ್ದರು.