

ಮಂಡ್ಯ: ಧನಗೂರು ಷಡಕ್ಷರ ಪೀಠ, ಮಳವಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಸಂಸ ಥಿಯೇಟರ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ನ.9 ಮತ್ತು 10ರಂದು ಮಳವಳ್ಳಿ ತಾಲೂಕು ಡಿ.ಹಲಸಹಳ್ಳಿ ಗ್ರಾಮದ ಷಡಕ್ಷರಿ ಗವಿಮಠದಲ್ಲಿ ‘ಹಳಗನ್ನಡ ಕಾವ್ಯ ಕಮ್ಮಟ’ ಹಮ್ಮಿಕೊಳ್ಳಲಾಗಿದೆ ಎಂದು ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ ತಿಳಿಸಿದರು.
9ರಂದು ಬೆಳಗ್ಗೆ 10.30ಕ್ಕೆ ಕನಕಪುರದ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಡಿ.ಹಲಸಹಳ್ಳಿಯ ಷಡಕ್ಷರಿ ಗವಿಮಠದ ಷಡಕ್ಷರಿ ಸ್ವಾಮೀಜಿ, ಧನಗೂರು ಷಡಕ್ಷರ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಉದ್ಘಾಟಿಸಲಿದ್ದಾರೆ. ಧನಗೂಡು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಡಿ.ರಾಮು, ಮುಖ್ಯ ಶಿಕ್ಷಕಿ ಜಿ.ಬಿ.ಶೈಲಜಾ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಸಂಸ ಥಿಯೇಟರ್‌ನ ಗೌರವಾಧ್ಯಕ್ಷ ಜಯರಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 2.15ಕ್ಕೆ ಭಾರತಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಮೊದಲಗೋಷ್ಠಿ ಆಯೋಜಿಸಿದ್ದು, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಆರ್.ವೇಣುಗೋಪಾಲ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ದೊಡ್ಡಲಿಂಗೇಗೌಡ, ವಿಶ್ರಾಂತ ಪ್ರಾಂಶುಪಾಲ ಚಂದ್ರಶೇಖರ ನಾದೂರು, ಸಹಾಯಕ ಪ್ರಾಧ್ಯಾಪಕಿ ಮಮತಾ ನಾಗ್ ವಿಷಯ ಮಂಡಿಸಲಿದ್ದಾರೆ. ಸಂಜೆ 6ಗಂಟೆಗೆ ಶಿಬಿರಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಧನಗೂರು ಷಡಕ್ಷರ ಪೀಠದ ಸದಸ್ಯ ಕೆ.ಪುಟ್ಟಸ್ವಾಮಿ ನಡೆಸಿಕೊಡಲಿದ್ದಾರೆ. 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ ದೃಶ್ಯ ಮೇಲುಕೋಟೆ ಸುಗ್ಗಿ ರಂಗ ಅಭಿನಯಿಸುವ ಕರ್ಣಭಾರ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
10ರಂದು ಬೆಳಗ್ಗೆ 6 ಗಂಟೆಗೆ ಯೋಗ ಗುರು ಎಂ.ಮಲ್ಲಿಕಾರ್ಜುನಸ್ವಾಮಿ ಯೋಗ ಉಪನ್ಯಾಸ ನಡೆಯಲಿದ್ದು, 7ಗಂಟೆಗೆ ಷಡಕ್ಷರ ಕವಿಯ ಹುಟ್ಟೂರು, ಧನಗೂರಿನ ಜನ್ಮಸ್ಥಳ ಹಾಗೂ ಷಡಕ್ಷರ ಮಂಟಪ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ. 9.45ಕ್ಕೆ ಧನಗೂರು ಷಡಕ್ಷರ ಪೀಠದ ಸದಸ್ಯ ಡಾ.ಎಂ.ಎಸ್.ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ರಾಜಶೇಖರ ವಿಳಾಸಂ ಕೃತಿಯ ಆಯ್ದ ಪದ್ಯಗಳ ಓದು, ಅರ್ಥ ವಿವರಣೆ, ಕಥಾ ನಿರೂಪಣೆ ಇರಲಿದೆ. 11.30ಕ್ಕೆ ನಂಜನಗೂಡಿನ ಸ.ಪ್ರದ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಯಶಂಕರ್ ಹಲಗೂರು ಅಧ್ಯಕ್ಷತೆಯಲ್ಲಿ ಶಬರ ಶಂಕರ ವಿಳಾಸಂ ಕೃತಿಯ ಆಯ್ದ ಪದ್ಯಗಳ, ಓದು, ಅರ್ಥ ವಿವರಣೆ, ಕಥಾ ನಿರೂಪಣೆ ವಿಷಯದ ಕುರಿತು ಗೋಷ್ಠಿ ಆಯೋಜಿಸಲಾಗಿದೆ. ಮಧ್ಯಾಹ್ನ 2.45ಕ್ಕೆ ಡಿ.ಹಲಸಹಳ್ಳಿಯ ಷಡಕ್ಷರಿ ಗವಿಮಠದ ಷಡಕ್ಷರಿ ಸ್ವಾಮೀಜಿ, ಧನಗೂರು ಷಡಕ್ಷರ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೊಣ್ಣೂರು ವೆಂಕಟಪ್ಪ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವಿದ್ದು, ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಶಾಂತರಾಜು ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಜೆ 4.45ಕ್ಕೆ ಕವಿಗೋಷ್ಠಿಯನ್ನು ಕಸಾಪ ತಾಲೂಕು ಅಧ್ಯಕ್ಷ ಎಲ್.ಚೇತನ್‌ಕುಮಾರ್ ಉದ್ಘಾಟಿಸುವರು, ಕನ್ನಡ ಪ್ರಾಧ್ಯಾಪಕ ಡಾ.ಎನ್.ಎಸ್.ಶಂಕರೇಗೌಡ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಉಮೇಶ್, ರಾಮಕೃಷ್ಣ, ಚೇತನ್‌ಕುಮಾರ್, ಸುರೇಶ್ ಉಪಸ್ಥಿತರಿದ್ದರು