

ಕುಶಾಲನಗರ: ವರ್ಷಕ್ಕೆ ಒಮ್ಮೆ ಬರುವ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಸಕಲ ದಾರಿದ್ರೃವೂ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ತಿಳಿಸಿದರು.
ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಬಾನುವಾರ ಧನಲಕ್ಷ್ಮೀ ಪೂಜೆ ನಂತರ ಮಾತನಾಡಿದ ಅವರು, ಪೂಜೆ ಮಾಡುವುದರಿಂದ ಸಕಲವೂ ಒಳ್ಳೆಯದಾಗುತ್ತೆ ಎನ್ನುವ ವಿಶ್ವಾಸ. ಆಶ್ವಿಜಾ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮಾತನಾಡಿ, ವಿಶ್ವದಲ್ಲಿ ಇತ್ತೀಚೆಗೆ ತಲೆದೋರಿರುವ ಯುದ್ಧಭೀತಿ ಯಿಂದ ಆದಷ್ಟು ಬೇಗ ಹೊರ ಬರುವಂತೆ ಆಗಲಿ. ಎಲ್ಲ ದೇಶಗಳಲ್ಲೂ ಶಾಂತಿ ನೆಲಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಕನ್ನಿಕಾಪರಮೇಶ್ವರಿ ದೇವಿಯನ್ನು ಸರ್ವಾಭರಣಗಳಿಂದ ಸಿಂಗರಿಸಲಾಗಿತ್ತು. ಆರ್ಯವೈಶ್ಯ ಜನಾಂಗದವರು ಮಾತ್ರವಲ್ಲದೆ ನೂರಾರು ಸಾರ್ವಜನಿಕರು ದೇವಿಯ ದರ್ಶನ ಪಡೆದು ಪುನೀತರಾದರು. ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಕೆ.ಜೆ.ನಾಗೇಂದ್ರ ಗುಪ್ತ, ವಿ.ಎನ್.ವಸಂತಕುಮಾರ್, ನಿರ್ದೇಶಕರಾದ ಬಿ.ಆರ್.ನಟರಾಜ್, ಎಂ.ಪಿ.ಸತ್ಯನಾರಾಯಣ, ಸದಸ್ಯರಾದ ಕೆ.ಜೆ.ರಮೇಶ್, ವಿ.ಎಲ್.ನಾಗೇಶ್, ಚಿತ್ರ ರಮೇಶ್, ಕಲ್ಪನಾ, ರೇಖಾ, ಕ್ಷಿತಿ ರಮೇಶ್ ಇದ್ದರು.