ಬೌದ್ಧ ವಿಹಾರದಲ್ಲಿ ಧಮ್ಮಚಕ್ರ ಪರಿವರ್ತನ ದಿನ-ವರ್ಷಾವಾಸದ ಸಮಾರೋಪ

BUDDHA VIHARA PRESS MEET
ವಿಜಯಪುರದ ಜಲನಗರದ ಬೌದ್ಧ ವಿಹಾರದಲ್ಲಿ ರಾಜಶೇಖರ ಯಡ್ಡಹಳ್ಳಿ ಸುದ್ದಿಗೋಷ್ಠಿ ನಡೆಸಿದರು. ಭಂತೆ ಡಾ.ಶಾಕು ಬೋಧಿಧಮ್ಮ, ಶಶಿಕಾಂತ ಹೊನವಾಡಕರ, ನಾಗರಾಜ ಲಂಬು ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಬೌದ್ಧ ವಿಹಾರ ನಿರ್ಮಾಣ ಸಮಿತಿಯಿಂದ ‘ಧಮ್ಮಚಕ್ರ ಪರಿವರ್ತನ ದಿನ’ ಹಾಗೂ ‘ವರ್ಷಾವಾಸದ ಸಮಾರೋಪ ಸಮಾರಂಭದಂಗವಾಗಿ ಅ.24ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ರಾಜಶೇಖರ ಯಡ್ಡಹಳ್ಳಿ ತಿಳಿಸಿದರು.

ಅಂದು ಬೆಳಗ್ಗೆ 11.30ಕ್ಕೆ ಜಲನಗರದ ಬೌದ್ಧ ವಿಹಾರದಲ್ಲಿ ಧಮ್ಮಚಕ್ರ ಪರಿವರ್ತನ ದಿನ ಮತ್ತು ವರ್ಷವಾಸ ಸಮಾರೋಪ ನಡೆಯಲಿದೆ. ಅದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯದ್ವಾರದ ಬಳಿಯ ಡಾ.ಅಂಬೇಡ್ಕರ್ ಭವನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅಲ್ಲಿಂದ ಜಲನಗರದಲ್ಲಿರುವ ಸಾರಿಪುತ್ರ ಬೋಧಿ ಧಮ್ಮ ಮಹಾ ಬುದ್ಧ ವಿಹಾರದವರೆಗೆ ಭಗವಾನ ಬುದ್ಧ ಮತ್ತು ಡಾ.ಬಾಬಾಸಾಹೇಬ್ ಅಂಬ್ಕೇಡರ್ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನಂತರ ನಡೆಯುವ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಭಂತೆ ಡಾ. ಶಾಕು ಬೋಧಿಧಮ್ಮ ವಹಿಸುವರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಉದ್ಘಾಟಿಸುವರು. ರಾಜಶೇಖರ ಯಡ್ಡಹಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮುಖಂಡರಾದ ಚಂದ್ರಶೇಖರ ಕೊಡಬಾಗಿ ಪಾಲ್ಗೊಳ್ಳುವರು. ಬೌದ್ಧವಿಹಾರ ನಿರ್ಮಾಣಕ್ಕೆ ಶ್ರಮಿಸಿದ ಚಿದಾನಂದ ನಿಂಬಾಳ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಭಂತೆ ಡಾ.ಶಾಕು ಬೋಧಿಧಮ್ಮ ಮಾತನಾಡಿ, ಭಗವಾನ ಬುದ್ಧರು ಸಾರನಾಥದಲ್ಲಿ ಧಮ್ಮೋಪದೇಶ ನೀಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಧಮ್ಮ ಚಕ್ರವನ್ನು ಉರುಳಿಸಿದರು. ನಂತರ ಸಾಮ್ರಾಟ್ ಅಶೋಕ ಕಳಿಂಗ ಯುದ್ದದ ನಂತರ ಮನಃ ಪರಿವರ್ತನೆಗೊಂಡು ಶಸ್ತ್ರ ತ್ಯಾಗ ಮಾಡಿ ಎರಡನೇ ಬಾರಿಗೆ ಧಮ್ಮಚಕ್ರವನ್ನು ಉರುಳಿಸಿದರು. ಅಶೋಕರು ಅದನ್ನು ಧಮ್ಮ ವಿಜಯವೆಂದು ಘೋಷಿಸಿದರು. ಆಧುನಿಕ ಭಾರತದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಾಗಪುರದಲ್ಲಿ ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ಮೂರನೇ ಬಾರಿಗೆ ಧಮ್ಮ ಚಕ್ರ ಉರುಳಿಸಿದರು. ಹೀಗಾಗಿ ಬೌದ್ಧ ಧಮ್ಮದಲ್ಲಿ ವಿಜಯದಶಮಿ ಮತ್ತು ಧಮ್ಮ ಚಕ್ರ ಪರಿವರ್ತನ ದಿನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದರು.

ಇನ್ನು ಭಗವಾನ ಬುದ್ಧರಿಗೆ ಜ್ಞಾನೋದಯವಾದ ಬಳಿಕ ಮೊದಲ ಬಾರಿಗೆ ತಮ್ಮ ಸ್ನೇಹಿತರಿಗೆ ಉಪದೇಶ ನೀಡಿದರು. ಆ ಮೊದಲ ವರ್ಷವಾಸದ (ಮಳೆಗಾಲದಲ್ಲಿ ವಾಸ) ಮೂರು ತಿಂಗಳು ವಿಶೇಷ ಮತ್ತು ಪ್ರಮುಖ ಅವಧಿಯಾಗಿದೆ. ಬಿಕ್ಕುಗಳು ಈ ಮೂರು ತಿಂಗಳ ಕಾಲ ಧ್ಯಾನದಲ್ಲಿ ಇರುತ್ತಾರೆ. ಬುದ್ಧ ಧರ್ಮದ ಮೂಲವು ಧ್ಯಾನವಾಗಿದೆ. ಎಲ್ಲರಲ್ಲೂ ಶಾಂತಿ, ಪ್ರೇಮ, ಬಂಧು-ಭಾವ ಇರಬೇಕು ಎಂದು ಧಮ್ಮವನ್ನು ಅಭ್ಯಾಸ ಮಾಡುತ್ತಾರೆ ಎಂದು ಕಾರ್ಯಕ್ರಮದ ಹಿನ್ನೆಲೆ ಹಾಗೂ ಮಹತ್ವದ ಕುರಿತು ತಿಳಿಸಿದರು.

ಬೌದ್ಧ ವಿಹಾರ ಸಮಿತಿ ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಚಿದಾನಂದ ನಿಂಬಾಳ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಅಡಿವೆಪ್ಪ ಸಾಲಗಲ್ಲ, ರಾಜು ತೊರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net