

ಮಂಗಳೂರು: ಮಾಧ್ಯಮಗಳ ಮೇಲೆ ಸಮಾಜ ಇಟ್ಟಿರುವ ಭರವಸೆಗಳಿಗೆ ಪೂರಕವಾಗಿ ಪತ್ರಿಕಾ ಧರ್ಮ ಪಾಲನೆ ಮಾಡುವುದು ಪ್ರತಿಯೋರ್ವ ಪತ್ರಕರ್ತರ ಹೊಣೆಗಾರಿಕೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ವೃತ್ತಿ ಬದ್ಧತೆ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಪ್ರತಿಯೋರ್ವ ಪತ್ರಕರ್ತನ ಜವಾಬ್ದಾರಿ. ನಕಲಿ ಹಾಗೂ ಬ್ಲಾೃಕ್‌ಮೇಲ್ ಪತ್ರಕರ್ತರಿಗೆ ಕಡಿವಾಣ ಹಾಕುವ ಕೆಲಸ ಪತ್ರಕರ್ತರಿಂದಲೇ ಆಗಬೇಕಿದೆ. ಪತ್ರಿಕೋದ್ಯಮದ ಬದಲಾವಣೆಗೆ ಒಗ್ಗಿಕೊಂಡು ಪತ್ರಕರ್ತರು ಕೆಲಸ ಮಾಡಬೇಕು ಎಂದರು.
ಪತ್ರಕರ್ತರ ಬೆಳವಣಿಗೆಗೆ ಮುದ್ರಣ ಮಾಧ್ಯಮ ಅತ್ಯಂತ ಸೂಕ್ತ ವೇದಿಕೆ. ಮುದ್ರಣ ಮಾಧ್ಯಮದ ಸುದ್ದಿಮನೆಯ ಗರಡಿಯಲ್ಲಿ ಬೆಳೆದ ಪತ್ರಕರ್ತರು ಬಳಿಕ ಯಾವುದೇ ಮಾಧ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು. ಭಾಷೆಯ ಬಳಕೆ, ಸುದ್ದಿ ಪ್ರಸ್ತುತಪಡಿಸುವ ರೀತಿ ಮುದ್ರಣ ಮಾಧ್ಯಮಗಳಲ್ಲಿ ಕಲಿಯಲು ಸಾಧ್ಯ ಎಂದು ಶಿವಾನಂದ ತಗಡೂರು ಹೇಳಿದರು.
ದ.ಕನ್ನಡ ಸಂಸದ ಸಮ್ಮೇಳನ ಉದ್ಘಾಟಿಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಜಿಲ್ಲಾ ಪತ್ರಕರ್ತರ ಸಂಘ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಅನಘಾ ರಿಫೈನರೀಸ್‌ನ ಆಡಳಿತ ನಿರ್ದೇಶಕ ಶಾಂಬಶಿವರಾವ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕರು ಹಾಗೂ ವಲಯ ಮುಖ್ಯಸ್ಥೆ ಗಾಯತ್ರಿ ಮುಖ್ಯ ಅತಿಥಿಗಳಾಗಿದ್ದರು.
ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಆನಂದ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್., ರಾಜ್ಯ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಶಯ ಭಾಷಣಗೈದರು. ಮಹಮ್ಮದ್ ಆರೀಫ್ ಪಡುಬಿದ್ರೆ ಶಿವಾನಂದ ತಗಡೂರು ಅವರ ಪರಿಚಯಗೈದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಅಂಗನವಾಡಿ ಮಕ್ಕಳಿಗೆ ಆಟಿಕೆ ವಿತರಿಸಲಾಯಿತು. ಹಸಿರು ಉಸಿರು ಯೋಜನೆಗೆ ಚಾಲನೆ ನೀಡಲಾಯಿತು. ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
‘ಗ್ರಾಮೀಣ ಪತ್ರಿಕೋದ್ಯಮ - ಹೊಸ ಆಯಾಮ’ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಅರವಿಂದ ನಾವಡ, ಬಿ.ರವೀಂದ್ರ ಶೆಟ್ಟಿ, ಹರ್ಷ ವಿಚಾರ ಮಂಡಿಸಿದರು. ಪತ್ರಕರ್ತ ಹರೀಶ್ ಮೋಟುಕಾನ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರತಿನಿಧಿ ಸಮ್ಮೇಳನ ನಡೆಯಿತು.