

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡದ ನಟ ಸಲೀಂ ಮುಲ್ಲಾನವರ ನಟಿಸಿರುವ ಧಾಕ್ ಹಿಂದಿ ಚಲನಚಿತ್ರ ಸೆ. 20ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಅನೀಸ್ ಬಾರೂದವಾಲೆ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ, ನಿರ್ದೇಶಕ ಮತ್ತು ನಿರ್ಮಾಪಕ ಧಾರವಾಡದವರು. ಯುವನಟ ಸಲೀಂ ಕೌಟುಂಬಿಕ ಚಲನಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ರಾಜಧಾನಿ ಕನ್ನಡ ಸಿನೆಮಾದಲ್ಲಿ ನಟಿಸಿದ್ದ ಶೀನಾ ಶಾಬಾದಿ ಸಲೀಂಗೆ ಜೋಡಿಯಾಗಿದ್ದಾರೆ. ಗಜನಿ ಖ್ಯಾತಿಯ ಪ್ರದೀಪ ರಾವತ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಆ್ಯಕ್ಷನ್ ಪ್ರೇಮಕಥೆಯ ಚಿತ್ರ. ಹುಬ್ಬಳ್ಳಿಯ ಅಪ್ಸರಾ, ಧಾರವಾಡದ ಸಂಗಮ ಸೇರಿ ದೇಶಾದ್ಯಂತ 500 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಬಾಂಬೆ ಫಿಲ್ಮ ಸಿಟಿ, ಪಂಚಗಣಿ, ಮುಂಬೈ ಮತ್ತು ಪುಣೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಧಾರವಾಡದ ಕೆಲ ಕಲಾವಿದರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗಿದೆ ಎಂದರು.
ನಟ ಸಲೀಂ ಮಾತನಾಡಿ, ಬಾಲಿವುಡ್ ಚಿತ್ರದಲ್ಲಿ ನಟಿಸುವ ಆಸೆ ಧಾಕ್ ಚಿತ್ರದ ಮೂಲಕ ನನಸಾಗಿದೆ. ಧಾರವಾಡದ ಅನೀಸ್ ಬಾರೂದವಾಲೆ ನಿರ್ದೇಶನ ಮಾಡಿದ್ದು, ನನ್ನ ತಂದೆ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರದ ಸಿಡಿ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ನಿರ್ಮಾಪಕ ಎಂ.ಎಚ್. ಮುಲ್ಲಾನವರ, ಶಿವಾನಂದ ಲೋಲೆನವರ, ನಿಜಾಮುದ್ದೀನ್, ಉಸ್ಮಾನ್ ಸುದ್ದಿಗೋಷ್ಠಿಯಲ್ಲಿದ್ದರು.