ತಿಂದಿದ್ದಕ್ಕೆ ಹಣ ಕೊಡಲಾಗದ ಪುಂಡರು ಕ್ಯಾಷಿಯರ್ ಪ್ರಾಣವನ್ನೇ ತೆಗೆದರು; ಪೆಟ್ರೋಲ್​ ದಾಳಿಗೊಳಗಾಗಿದ್ದ ಢಾಬಾ ನೌಕರ ಸಾವು

Manoj
Published on

ಬೆಂಗಳೂರು: ಊಟ ಮಾಡಿದ್ದಕ್ಕೆ ದುಡ್ಡು ಕೊಡಿ ಎಂದಿದ್ದಕ್ಕೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟಿದ್ದ ದುಷ್ಕರ್ಮಿಗಳ ಕೃತ್ಯದಿಂದ ಕ್ಯಾಷಿಯರ್ ಪ್ರಾಣ ಹೋಗಿದೆ. ಕಿಡಿಗೇಡಿಗಳ ದಾಳಿಗೆ ಒಳಗಾಗಿ ಜೀವ್ಮನರಣ ಹೋರಾಟ ನಡೆಸುತ್ತಿದ್ದ ಯುವಕ ಇಂದು ಕೊನೆಯುಸಿರೆಳೆದಿದ್ದಾನೆ.

ಹಾಸನ ಮೂಲದ ಹೆಸರುಘಟ್ಟ ದೊಡ್ಡಬ್ಯಾಲೇಕೆರೆ ನಿವಾಸಿ ಮನೋಜ್ (29) ಸಾವಿಗೀಡಾದ ವ್ಯಕ್ತಿ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಈ ವ್ಯಕ್ತಿ, ಚಿಂತಾಜನಕ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಈತ ಬೆಂಗಳೂರು ಉತ್ತರ ತಾಲ್ಲೂಕು ದೊಡ್ಡಬ್ಯಾಲಕೆರೆಯ ಯು-ಟರ್ನ್ ಢಾಬಾದಲ್ಲಿ ಕ್ಯಾಷಿಯರ್ ಆಗಿದ್ದು, ಗುರುವಾರ ತಡರಾತ್ರಿ ದುಷ್ಕರ್ಮಿಗಳಿಂದ ದಾಳಿಗೆ ಒಳಗಾಗಿದ್ದ.

ಅಂದು ತಡರಾತ್ರಿ 10.30ಕ್ಕೆ ಇಬ್ಬರು ವ್ಯಕ್ತಿಗಳು ಊಟಕ್ಕೆ ಬಂದಿದ್ದರು. ಊಟ ಮಾಡಿ ಬಹಳ ಹೊತ್ತು ಮಾತನಾಡುತ್ತ ಕುಳಿತಿದ್ದಾಗ ಡಾಬಾದ ನೌಕರರು ಬಾಗಿಲು ಮುಚ್ಚಬೇಕು. ಬಿಲ್ ಕೊಡುವಂತೆ ಕೇಳಿದ್ದರು. ಇದರಿಂದ ಆಕ್ರೋಶಗೊಂಡ ಅಪರಿಚಿತರು ಸಪ್ಲೈಯರ್‌ಗೆ ಬೈದು ತೆರಳಿದ್ದರು.

ಬಳಿಕ ಮಧ್ಯರಾತ್ರಿ 12.30ಕ್ಕೆ ಡಾಬಾ ಬಳಿ ದ್ವಿಚಕ್ರ ವಾಹನದಲ್ಲಿ ವಾಪಸ್ ಬಂದ ಅಪರಿಚಿತರು, ತಾವು ತಂದಿದ್ದ ಪೆಟ್ರೋಲನ್ನು ಢಾಬಾ ಬಾಗಿಲಿಗೆ ಸುರಿದು ಅದರ ಚಿಲಕ ಹಾಕಿ ಬೆಂಕಿ ಹಚ್ಚಿದ್ದರು. ಒಳಗಡೆ ಊಟ ಮಾಡುತ್ತಿದ್ದ ಮನೋಜ್ ಬೆಂಕಿಯನ್ನು ಕಂಡು ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಭಾವಿಸಿ ಬಾಗಿಲ ಬಳಿಗೆ ಓಡಿ ಬಂದಿದ್ದ. ಆರೋಪಿಗಳು ಎರಚುತ್ತಿದ್ದ ಪೆಟ್ರೋಲ್ ಮನೋಜ್ ಮೇಲೆ ಬಿದ್ದು, ಆತನ ಮೈಗೂ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಇತರ ಕಾರ್ಮಿಕ ಮನೋಜ್ ಮೈಗೆ ತಾಗಿದ್ದ ಬೆಂಕಿ ನಂದಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಬೈಕ್‌ನಲ್ಲಿ ಇಬ್ಬರು ಅಪರಿಚಿತರು ಬಂದಿದ್ದರು. ಅವರು ಯಾರು? ಯಾವ ಕಾರಣಕ್ಕೆ ಬಂದಿದ್ದರು? ಎಂಬುದು ಗೊತ್ತಿಲ್ಲ. ಪೊಲೀಸರಿಗೆ ಎಲ್ಲ ಮಾಹಿತಿ ನೀಡಿದ್ದೇವೆ. ಆರೋಪಿಗಳು ಯಾವ ಉದ್ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಲಿಲ್ಲ ಎಂದು ಡಾಬಾ ಮಾಲೀಕ ದೀಪಕ್ ತಿಳಿಸಿದ್ದರು. ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಇನ್ನೂ ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net