ಬಂಡಾಯದ ನಾಡಲ್ಲಿ ರಂಗೇರಿದ ಕಣ

17 NRD-1C
Published on

ವಿಜಯವಾಣಿ ವಿಶೇಷ ನರಗುಂದ

ಮೈ ಕೊರೆಯುವ ಚಳಿಯ ನಡುವೆಯೂ ಬಂಡಾಯದ ನಾಡು ನರಗುಂದ ತಾಲೂಕಿನಲ್ಲಿ ಗ್ರಾ.ಪಂ. ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಗ್ರಾಮಸೌಧದ ಪ್ರವೇಶಕ್ಕಾಗಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಲವು ಕಸರತ್ತು ನಡೆಸುತ್ತಿದ್ದು, ಹೋಟೆಲ್, ದಾಬಾ, ಬಾರ್-ರೆಸ್ಟೋರೆಂಟ್​ಗಳಿಗೆ ಶುಕ್ರದೆಸೆ ಶುರುವಾಗಿದೆ.

ತಾಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 166 ಸದಸ್ಯ ಸ್ಥಾನಗಳಿಗೆ ಡಿ. 11ರಿಂದ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿ ಡಿ. 16ರವರೆಗೆ 545 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ತಮಗೆ ನೇರವಾಗಿ ಪೈಪೋಟಿ ನೀಡುವ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರನ್ನು ಪಟ್ಟಣದ ಹೊರ ಪ್ರದೇಶಕ್ಕೆ ಕರೆಸಿಕೊಂಡು ಗುಂಡು, ತುಂಡಿನ ಜತೆಗೆ ನಾಮಪತ್ರ ಹಿಂಪಡೆಯುವಂತೆ ಆಮಿಷ ಒಡ್ಡುತ್ತಿದ್ದಾರೆ. ಗ್ರಾಮದ ಹಿರಿಯರು, ರಾಜಕೀಯ ಮುಖಂಡರ ಪ್ರವೇಶದಿಂದ ಇದಕ್ಕೆ ಹಲವು ಮಂದಿ ಒಪ್ಪಿಗೆ ನೀಡಿದ್ದು, ಕೊಟ್ಟಿರುವ ನಾಮಪತ್ರ ಹಿಂಪಡೆಯುವ ಮುನ್ಸೂಚನೆ ಕಂಡು ಬರುತ್ತಿದೆ. ಇನ್ನೂ ಕೆಲವರು ಈ ಗ್ರಾಮ ಪಂಚಾಯಿತಿ ಚುನಾವಣೆಯನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕಣದಿಂದ ಹಿಂದೆ ಸರಿಯದೆ ಮತದಾರರನ್ನು ಸೆಳೆಯಲು ಜಾತಿ, ಧರ್ಮದ ಜತೆಗೆ ಹಲವು ಅಸ್ತ್ರಗಳ ಪ್ರಯೋಗಕ್ಕೆ ಮುಂದಾಗಿದ್ದಾರೆ.

ತಾಲೂಕಿನ ಚಿಕ್ಕನರಗುಂದ, ಕೊಣ್ಣೂರ, ಶಿರೋಳ ಹಾಗೂ ನಗರ ಪ್ರದೇಶಗಳಿಲ್ಲಿರುವ ದಾಬಾಗಳು ಮಧ್ಯಾಹ್ನ 12 ಗಂಟೆಗೆ ತುಂಬಿ ತುಳುಕುತ್ತಿವೆ. ಕೆಲವೊಂದಿಷ್ಟು ಅಭ್ಯರ್ಥಿಗಳು ಬಾರ್ ಮಾಲೀಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವುದರಿಂದ ದೂರವಾಣಿ ಕರೆ ಮಾಡಿ ಅಗತ್ಯ ಮದ್ಯದ ವ್ಯವಸ್ಥೆ ಮಾಡುತ್ತಿದ್ದಾರೆ.

ನರಗುಂದ ತಾಲೂಕಿನಲ್ಲಿರುವ 18 ಮದ್ಯದ ಅಂಗಡಿಗಳಲ್ಲಿ ಮಾರಾಟದ ಪ್ರಮಾಣವೂ ಹೆಚ್ಚಾಗಿದೆ. ಲಾಕ್​ಡೌನ್ಕ್ಕಿಂತ ಮುಂಚೆ ಪ್ರತಿ ತಿಂಗಳು ವಿವಿಧ ಕಂಪನಿಗಳ 7808 ಮದ್ಯದ ಪೆಟ್ಟಿಗೆ ಅಂದರೆ 67,461.12 ಲೀಟರ್ ಮದ್ಯ ಮಾರಾಟವಾಗುತ್ತಿತ್ತು. ಇದೀಗ 7987 ಮದ್ಯದ ಬಾಕ್ಸ್​ಗಳು ಮಾರಾಟವಾಗುತ್ತಿವೆ. ಡಿ. 1ರಿಂದ 16ರವರೆಗೆ ಕೇವಲ 16 ದಿನಗಳಲ್ಲಿ 4500 ಮದ್ಯದ ಬಾಕ್ಸ್​ಗಳು ಮಾರಾಟವಾಗಿದ್ದು, ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟದ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಚುನಾವಣೆಯ ನೀತಿ ಸಂಹಿತಿ ಜಾರಿಯಾದ ಬಳಿಕ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಎರಡು ದ್ವಿಚಕ್ರ ವಾಹನ ಮತ್ತು 39 ಲೀಟರ್ ವಿವಿಧ ಕಂಪನಿಗಳ ಮದ್ಯದ ಪ್ಯಾಕೆಟ್​ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 11 ಜನರ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಡಿದ್ದಾರೆ.

ಗ್ರಾಪಂ ಚುನಾವಣೆ ನಡೆದಿರುವುದರಿಂದ ಈಗಾಗಲೇ ತಾಲೂಕಿನ ಎಲ್ಲ ಮದ್ಯದ ಅಂಗಡಿಗಳ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ, ಸಾಗಾಟ ಮಾಡಿದರೆ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ತಾಲೂಕಿನ ಎಲ್ಲ ಮದ್ಯದಂಗಡಿ ಮಾಲೀಕರು ಕೂಡ ನಿಗದಿತ ಸಮಯದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ನೀತಿಸಂಹಿತೆ ಪಾಲಿಸಬೇಕು. | ಬಸವರಾಜ ಜಾಮಗೊಂಡ, ಅಬಕಾರಿ ನೀರಿಕ್ಷಕ ನರಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net